ಹೂವಿನಹಡಗಲಿ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಉಪತಹಸೀಲ್ದಾರ್ ಮಲ್ಲಿಕಾರ್ಜುನಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಸಂಘದ ತಾಲೂಕು ಅಧ್ಯಕ್ಷ ಉತ್ತಂಗಿ ಆನಂದ ಮಾತನಾಡಿ, ರಾಜ್ಯದಲ್ಲಿ 2017ರ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು 2016ಕ್ಕಿಂತ ಮೊದಲು ನೇಮಕಗೊಂಡವರಿಗೆ ಪೂರ್ವಾನ್ವಯಗೊಳಿಸಬಾರದು. ಅರ್ಹ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 2016 ಪೂರ್ವದಂತೆ ಅರ್ಹತೆಯ ಆಧಾರದ ಮೇಲೆ ಪ್ರೌಢಶಾಲೆಗೆ ಮುಂಬಡ್ತಿ ನೀಡಬೇಕು. 2016ರ ಪೂರ್ವದಂತೆ ಮುಖ್ಯಶಿಕ್ಷಕರ ಹಾಗೂ ಹಿರಿಯ ಮುಖ್ಯಶಿಕ್ಷಕರ ಹುದ್ದೆಗೆ ಸೇವಾ ಜ್ಯೇಷ್ಠತೆ ಆಧಾರದ ಮೇಲೆ ಬಡ್ತಿ ನೀಡಬೇಕು ಎಂದು ಆಗ್ರಹಿಸಿದರು.
ರಾಜ್ಯವು ಶಾಲಾ ಶಿಕ್ಷಣದಲ್ಲಿ ಅನೇಕ ಹೊಸ ಉಪಕ್ರಮಗಳನ್ನು ತರುವ ಮೂಲಕ ದೇಶದಲ್ಲಿ ಮಾದರಿಯಾಗಿದೆ. ಸುಮಾರು 1,88,532 ಶಿಕ್ಷಕರಲ್ಲಿ ಹಿರಿಯ ಮುಖ್ಯ ಶಿಕ್ಷಕರು, ಮುಖ್ಯಶಿಕ್ಷಕರು, ಸಹಶಿಕ್ಷಕರು ಹಾಗೂ ವಿಶೇಷ ಶಿಕ್ಷಕರು ಕರ್ತವ್ಯನಿರ್ವಹಿಸುತ್ತಿದ್ದಾರೆ. 1 ರಿಂದ 7 ಹಾಗೂ 1 ರಿಂದ 8 ನೇ ತರಗತಿವರೆಗೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎನ್‌ಸಿಟಿಇ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿಯ ಶಿಫಾರಸುಗಳಿಗೆ ಅನುಕೂಲವಾಗುವಂತೆ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರು ಕರ್ತವ್ಯನಿರ್ವಹಿಸುತ್ತ ಬಂದಿದ್ದಾರೆ. ಅವರಿಗೆ ಅರ್ಹತೆಯ ಆಧಾರದ ಮೇಲೆ ಬಡ್ತಿ ನೀಡಿ ಹಳೆಯ ನಿಯಮವನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಸಂಘದ ಉಪಾಧ್ಯಕ್ಷ ಸಿ.ಮೈಲಾರಿ, ಮಹಿಳಾ ಘಟಕದ ಜಿಲ್ಲಾ ಸಹಕಾರ್ಯದರ್ಶಿ ಸಿದ್ದಮ್ಮ, ಉಪಾಧ್ಯಕ್ಷೆ ವಿನೋದಕುಮಾರಿ, ಸಂಘಟನಾ ಕಾರ್ಯದರ್ಶಿ ರೇಖಾ, ಮಾಜಿ ಅಧ್ಯಕ್ಷ ವಿ.ಬಿ.ಜಗದೀಶ್, ಶಿಕ್ಷಕರಾದ ಜಗದೀಶ, ವಿಶ್ವನಾಥ ಇತರರಿದ್ದರು.