ಹೂವಿನಹಡಗಲಿ: ಅಪಘಾತದಿಂದ ಸಂಕಷ್ಟದಲ್ಲಿರುವವರ ಜೀವ ಉಳಿಸುವ ಉದ್ದೇಶದಿಂದ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವುದು ಶ್ಲಾಘನಿಯವಾಗಿದ್ದು, ಅದಕ್ಕಾಗಿ ಸೇವಾ ಮನೋಭಾವ ಬೆಳೆಸಿಕೊಳ್ಳುವುದು ಮುಖ್ಯ ಎಂದು ಪ್ರಾಚಾರ್ಯ ಎಸ್.ಎಸ್.ಪಾಟೀಲ ಹೇಳಿದರು.
ಪಟ್ಟಣದಲ್ಲಿ ಜಿಬಿಆರ್ ಪದವಿ ಕಾಲೇಜು ಹಾಗೂ ಸ್ವಾಮಿ ವಿವೇಕಾನಂದ ರಕ್ತ ಭಂಡಾರದ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕಾಲೇಜು ದಿನಗಳಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿಗೆ ಪ್ರಾಧ್ಯಾಪಕರು ಶ್ರಮಿಸುತ್ತಿದ್ದು, ಉತ್ತಮ ಅಂಕಗಳನ್ನು ಗಳಿಸುವ, ಉನ್ನತ ಹುದ್ದೆ ಪಡೆಯುವ ಗುರಿಯನ್ನು ವಿದ್ಯಾರ್ಥಿಗಳು ಹೊಂದಬೇಕು ಎಂದರು.
ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮನೋಭಾವ ಹಾಗೂ ಸಂಸ್ಕಾರವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ರಕ್ತ ದಾನದಿಂದ ಮತ್ತೊಂದು ಜೀವವನ್ನು ಉಳಿಸಿದ ಪುಣ್ಯ ದಾನಿಗೆ ಲಭಿಸುತ್ತದೆ. ಯಾವಾಗ, ಯಾರಿಗೆ, ಹೇಗೆ ರಕ್ತದ ಅವಶ್ಯ ಬೀಳುತ್ತದೆ ಎಂಬುದು ಹೇಳಲಾಗದು.
ನಾವು ಅಧಿಕ ಹಣ ವ್ಯಯಿಸಿ ಸಮಾರಂಭಗಳನ್ನು ಏರ್ಪಡಿಸುತ್ತೇವೆ. ಅವುಗಳಲ್ಲಿಯೂ ರಕ್ತದಾನದ ಮಹತ್ವ ಹಾಗೂ ಶಿಬಿರಗಳನ್ನು ಆಯೋಜಿಸಿ ಜನರಲ್ಲಿ ಜಾಗೃತಿ ಮೂಡಿಸುವ ಅವಶ್ಯ ಇದೆ ಎಂದರು.
ಶಿಬಿರದಲ್ಲಿ 30 ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ಸ್ವಾಮಿ ವಿವೇಕಾನಂದ ರಕ್ತ ಭಂಡಾರದ ವ್ಯವಸ್ಥಾಪಕ ಗೋಪಾಲರೆಡ್ಡಿ, ಐಕ್ಯೂಎಸಿ ಸಂಯೋಜಕಿ ಡಾ.ಮಹಿಮಾ ಜ್ಯೋತಿ, ಎನ್‌ಎಸ್‌ಎಸ್ ಘಟಕಾಧಿಕಾರಿಗಳಾದ ಡಾ.ಶರಣಪ್ಪ, ಮಾಬುಸಾಬ್, ದೈಹಿಕ ನಿರ್ದೇಶಕ ಬಡೆಸಾಬ್ ನಾಯಕ, ಸಹಾಯಕ ಪ್ರಾಧ್ಯಾಪಕರಾದ ಹರ್ಷ, ಸಂಜಯ್, ಚೈತ್ರಾ, ವೀಣಾ, ಅನ್ನದಾನಪ್ಪ, ವಿದ್ಯಾರ್ಥಿಗಳು ಇದ್ದರು.