ಹೂವಿನಹಡಗಲಿ ತಾಲೂಕಿನ ಹೊಳಲು ಗ್ರಾಮವನ್ನು ಪ್ರವೇಶಿಸಿದ ನಿರ್ಮಲ ತುಂಗಭದ್ರಾ ಅಭಿಯಾನದ ಪಾದಯಾತ್ರೆ ವೇಳೆ ಜಾಗೃತಿ ಜಾಥಾ ನಡೆಸಲಾಯಿತು. ಮಾಜಿ ಶಾಸಕ ಮಹಿಮಾ ಪಟೇಲ್, ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನದ ದಕ್ಷಿಣ ಭಾರತ ಸಂಚಾಲಕ ಮಾಧವ್, ಗ್ರಾಪಂ ಅಧ್ಯಕ್ಷ ಚನ್ನಬಸಪ್ಪ ಗುಡದೂರು, ಮುಖ್ಯಶಿಕ್ಷಕ ಶಾಮಸುಂದರ, ಗ್ರಾಮಸ್ಥರಾದ ರವಿ ಕೆ, ಮಂಜುನಾಥ, ಅಶೋಕ ಜಿ, ವೀರಪ್ಪ ಇತರರಿದ್ದರು. 
ಜಿಲ್ಲೆ

ನದಿಗೆ ತ್ಯಾಜ್ಯ ಹರಿಸುವುದು ನಿಲ್ಲಲಿ; ಮಾಜಿ ಶಾಸಕ ಮಹಿಮಾ ಪಟೇಲ್ ಹೇಳಿಕೆ

ಹೂವಿನಹಡಗಲಿ: ಮರಳುಗಾರಿಕೆ ಹಾಗೂ ತ್ಯಾಜ್ಯ ಬಿಡುವ ಕೆಲಸಗಳು ನಿಂತಾಗ ನದಿ ತಾನಾಗಿಯೇ ಶುದ್ಧವಾಗುತ್ತದೆ ಎಂದು ಮಾಜಿ ಶಾಸಕ ಮಹಿಮಾ ಪಟೇಲ್ ಹೇಳಿದರು.

ಹೊಳಲು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಸೋಮವಾರ ನಿರ್ಮಲ ತುಂಗಭದ್ರಾ ಅಭಿಯಾನದ ಬೃಹತ್ ಪಾದಯಾತ್ರೆಯ ಭಾಗವಾಗಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ನದಿಯು ಏರುಗತಿಯಲ್ಲಿ ಕಲುಷಿತಗೊಳ್ಳುತ್ತಿರುವುದು ದುರದೃಷ್ಟದ ಸಂಗತಿ. ನಗರ, ಗ್ರಾಮಗಳ ತ್ಯಾಜ್ಯದ ನೀರು, ಪ್ಲಾಸ್ಟಿಕ್ ಬಳಕೆ, ಹೊಲ-ಗದ್ದೆಗಳಿಗೆ ರಸಗೊಬ್ಬರ, ಕೀಟನಾಶಕಗಳ ಬಳಕೆ ಮಾಡಿದ ನೀರನ್ನು ನದಿಗೆ ಹರಿಸುವುದರಿಂದ ಕುಡಿಯಲು ಯೋಗ್ಯವಲ್ಲದ ನೀರು ದೊರಕುತ್ತವೆ. ಪಶ್ಚಿಮ ಘಟ್ಟದಲ್ಲಿ ದೊಡ್ಡ ಮರಗಳನ್ನು ಕಡಿಯಲಾಗಿದ್ದು, ಇದರಿಂದ ಪ್ರಕೃತಿ ಹಾನಿಗೀಡಾಗಿದೆ ಎಂದರು.

ಶೃಂಗೇರಿಯ ಗಂಗಡಿಕಲ್ಲು ಬಳಿಯ ಗಂಗಾ ಮೂಲದಲ್ಲಿ ಹುಟ್ಟುವ ತುಂಗ-ಭದ್ರಾ ನದಿಗಳು ಮುಂದೆ ಹರಿದು ಶಿವಮೊಗ್ಗದ ಸಮೀಪ ಕೂಡಲಿಯಲ್ಲಿ ಸಂಗಮವಾಗಿ ಸುಮಾರು 500 ಕಿ.ಮೀ. ದೂರ ಸಂಚರಿಸುತ್ತದೆ. ಆದರೆ ಈ ನದಿಯ ನೀರು ಈಗ ಕುಡಿಯಲು ಯೋಗ್ಯವಲ್ಲದ ಸ್ಥಿತಿಗೆ ಬಂದಿದೆ, ಇದಕ್ಕೆ ಯಾರು ಹೊಣೆ? ಜನ-ಜಾನುವಾರುಗಳಿಗೆ ಮುಖ್ಯವಾಗಿ ಬೇಕಾಗಿರುವುದು ಜೀವಜಲ. ಆದರೆ, ನಾವು ಅದನ್ನು ಕಲುಷಿತಗೊಳಿಸುತ್ತಿದ್ದೇವೆ. ದೇಶದ ಯುವ ಶಕ್ತಿಯು ಎಚ್ಚರವಾದಾಗ ನಮ್ಮಲ್ಲಿನ ಸಂಪತ್ತು ಉಳಿಯಲು ಸಾಧ್ಯ ಎಂದು ಹೇಳಿದರು.