ಜಿಲ್ಲೆ

20 ತಿಂಗಳಿಂದ ಕಚೇರಿಗೆ ಅಲೆದರೂ ಸ್ಪಂದಿಸದ ಅಧಿಕಾರಿಗಳು ರೈತನ ನಿರಶನಕ್ಕೆ ಮಣಿದರು; ಜಮೀನು ತತ್ಕಾಲ್ ಪೋಡಿಗಾಗಿ ಹಡಗಲಿಯಲ್ಲಿ ರೈತ ಸುರೇಂದ್ರನಾಥ ಪ್ರತಿಭಟನೆ

Ballari

ಹೂವಿನಹಡಗಲಿ: ಜಮೀನು ತತ್ಕಾಲ್ ಪೋಡಿ ಮಾಡಲು ಒಂದೂವರೆ ವರ್ಷದಿಂದ ಸತಾಯಿಸುತ್ತಿರುವ ಅಧಿಕಾರಿಗಳ ಕಾರ್ಯವೈಖರಿಗೆ ಬೇಸತ್ತ ರೈತನೊಬ್ಬ ಸೋಮವಾರ ಪಟ್ಟಣದ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಆವರಣದಲ್ಲಿ ನಿರಶನ ನಡೆಸಿದರು.

ಹಿರೇಹಡಗಲಿ ಹೋಬಳಿ ವ್ಯಾಪ್ತಿ ಹ್ಯಾರಡ ಗ್ರಾಮದ ಕೆ.ಸುರೇಂದ್ರನಾಥ ನಿರಶನ ಕೈಗೊಂಡ ರೈತ. ಇವರಿಗೆ ಸೇರಿದ ಸರ್ವೇ ನಂ. 287/1 ರಲ್ಲಿ 6 ಎಕರೆ 20 ಸೆಂಟ್ಸ್ ಜಮೀನು ತತ್ಕಾಲ್ ಪೋಡಿಗೆ ಕಳೆದ 20 ತಿಂಗಳಿನಿಂದ ಕಚೇರಿಗೆ ಅಲೆಯುತ್ತಿದ್ದಾರೆ. ಆದರೆ, ಅಧಿಕಾರಿಗಳು, ಸಿಬ್ಬಂದಿ ಸ್ಪಂದಿಸದ ಕಾರಣ ಸೋಮವಾರ ಕಚೇರಿ ಆವರಣದಲ್ಲಿ ಗಾಂಧೀಜಿ ಭಾವಚಿತ್ರದೊಂದಿಗೆ ಮುಖಕ್ಕೆ ಮಾಸ್ಕ್ ಧರಿಸಿ ಪ್ರತಿಭಟನೆ ಕುಳಿತರು.

ವಿಷಯ ತಿಳಿದು ಸ್ಥಳಕ್ಕೆ ಬಂದ ಪಿಎಸ್‌ಐ ಎಸ್.ಪಿ.ನಾಯ್ಕ ಹಾಗೂ ಭೂ ದಾಖಲೆಗಳ ಸಹಾಯಕ ನಿರ್ದೇಶಕಿ ಹಂಸಕುಮಾರಿ, ನಾಲ್ಕು ದಿನಗಳಲ್ಲಿ ಜಮೀನಿಗೆ ಸಂಬಂಧಿಸಿ ಸಮಸ್ಯೆ ಇತ್ಯರ್ಥಪಡಿಸಲಾಗುವುದು ಎಂದು ಭರವಸೆ ನೀಡುವ ಮೂಲಕ ರೈತನ ಮನವೊಲಿಸಿದರು. ಬಳಿಕ ಸುರೇಂದ್ರನಾಥ ನಿರಶನ ಹಿಂಪಡೆದರು.