ಹೂವಿನಹಡಗಲಿ: ತಾಲೂಕಿನ ಸುಕ್ಷೇತ್ರ ಮೈಲಾರಕ್ಕೆ ಮೂಲ ಸೌಕರ್ಯ ಒದಗಿಸುವಲ್ಲಿ ಮುಜರಾಯಿ ಇಲಾಖೆ ಹಾಗೂ ಜಿಲ್ಲಾಡಳಿತ ಸೋತಿವೆ ಎಂದು ಗ್ರಾಪಂ ಅಧ್ಯಕ್ಷ ಭರಮಪ್ಪ ಇಟಿಗಿ ಆರೋಪಿಸಿದರು.
ಗ್ರಾಪಂ ಕಚೇರಿಯಲ್ಲಿ ಮೈಲಾರಲಿಂಗೇಶ್ವರ ದೇವಸ್ಥಾನ ಸಮಿತಿ, ಶಿಕ್ಷಣ ಇಲಾಖೆ ಮತ್ತು ಗ್ರಾಮಸ್ಥರೊಂದಿಗಿನ ಜಂಟಿ ಸಭೆಯಲ್ಲಿ ಮಂಗಳವಾರ ಮಾತನಾಡಿದರು. ಕ್ಷೇತ್ರಕ್ಕೆ ಭಾನುವಾರ, ಗುರುವಾರ ಸಾವಿರಾರು ಭಕ್ತರು ಆಗಮಿಸುತ್ತಾರೆ. ಪ್ರತಿ ಹುಣ್ಣಿಮೆಗೆ ಮತ್ತು ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಇದರಿಂದಾಗಿ ಕ್ಷೇತ್ರದಲ್ಲಿ ನೈರ್ಮಲ್ಯ ಹೆಚ್ಚುತ್ತಿದೆ. ವಾಹನ ದಟ್ಟಣಯಿಂದ ಗ್ರಾಮದ ರೈತರು ಹೊಲ-ಗದ್ದೆಗಳಿಗೆ ತೆರಳಲು, ಎತ್ತಿನಬಂಡಿಗಳು ಹೋಗಲು ಕಷ್ಟವಾಗಿದೆ. ಭಕ್ತರಿಂದ ದೇವಸ್ಥಾನಕ್ಕೆ ಕೋಟ್ಯಂತರ ಆದಾಯವಿದ್ದರೂ ಸೌಕರ್ಯ ಮಾತ್ರ ಒದಗಿಸುತ್ತಿಲ್ಲ. ಬಸ್ ನಿಲ್ದಾಣ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಆರೋಗ್ಯ ಕೇಂದ್ರವೇ ಅನಾರೋಗ್ಯಕ್ಕೆ ಸಿಲುಕಿದೆ. ಮೂಲಸೌಕರ್ಯ, ವಾಹನ ಪಾರ್ಕಿಂಗ್‌ಗೆ ಕ್ರಿಯಾಯೋಜನೆ ತಯಾರಿಸಿ ಜಿಲ್ಲಾಡಳಿತಕ್ಕೆ ಸಲ್ಲಿಸಿದರೂ ಸ್ಪಂದನೆ ಸಿಕ್ಕಿಲ್ಲ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಉಪಾಧ್ಯಕ್ಷ ರಾಜೇಂದ್ರಗೌಡ ಮಾತನಾಡಿ, ದೇವಸ್ಥಾನಕ್ಕೆ ತೆರಳುವ ದಾರಿಯಲ್ಲೇ ಪ್ರಾಥಮಿಕ ಶಾಲೆ ಇದೆ. ಆಟದ ಮೈದಾನ ಹದಗೆಟ್ಟಿದೆ. ಈ ಸಮಸ್ಯೆ ಸರಿಪಡಿಸಬೇಕು. ಸ್ವಚ್ಛತೆ ಬಗ್ಗೆ ವಿದ್ಯಾರ್ಥಿಗಳಿಂದ ಜಾಥಾ ನಡೆಸಿ, ಜಾಗೃತಿ ಮೂಡಿಸುವ ಸಂಬಂಧ ಬಿಇಒಗೆ ಗಮನಕ್ಕೆ ತರಲಾಗುವುದು ಎಂದರು.
ಗ್ರಾಪಂ ಉಪಾಧ್ಯಕ್ಷೆ ಸರಸ್ವತಿ ಕಂಚಾವೀರ, ಸದಸ್ಯರಾದ ಲಿಂಗರಾಜ ಚವ್ಹಾಣ್, ದುರುಗಪ್ಪ ಕುರಣ್ಣನವರ, ಮಾಲತೇಶ ಡಂಬಳ, ನಾಗಪ್ಪ ದೇವರಗುಡ್ಡ, ಗೌರಮ್ಮ ಡಿ.ಎಸ್. ನೀಲಮ್ಮ ಚೌಟಗಿ, ಹಾಲಮ್ಮ, ರಾಘವೇಂದ್ರ ಪಾಟೀಲ, ನಾಗಪ್ಪ ಬೆನ್ನೂರು ಇತರರು ಇದ್ದರು.
ಮೈಲಾರದಲ್ಲಿ 921 ಕುಟುಂಬಗಳು, 4269 ಜನಸಂಖ್ಯೆ ಇದೆ. ಮೂಲ ಸೌಕರ್ಯ ಒದಗಿಸಲು ಕರವಸೂಲಿಯಿಂದ ಹಣ ಬಿಟ್ಟು ಬೇರೆ ಅನುದಾನ ಬಳಸುವಂತಿಲ್ಲ. ಸಿಬ್ಬಂದಿ ಕೊರತೆ ಬೇರೆ ಇದೆ. ಗ್ರಾಪಂವೊಂದರಿಂದ ಅಭಿವೃದ್ಧಿ ಅಸಾಧ್ಯ. ದೇವಸ್ಥಾನ ಸಮಿತಿ ಕೈ ಜೋಡಿಸಬೇಕು.| ಭರಮಪ್ಪ ಇಟಗಿ, ಮೈಲಾರ ಗ್ರಾಪಂ ಅಧ್ಯಕ್ಷ