ಹೂವಿನಹಡಗಲಿ: ಪಟ್ಟಣದಲ್ಲಿ 124 ವರ್ಷ ಹಳೆಯ ಕಟ್ಟಡ ಸಮರ್ಪಕ ನಿರ್ವಹಣೆ ಇಲ್ಲದೆ ಶಿಥಿಲಾವಸ್ಥೆಗೆ ತಲುಪಿದೆ. ಈ ಕಟ್ಟಡದಲ್ಲಿ ತಾಲೂಕು ಆಡಳಿತ ಕಚೇರಿ, ಪೊಲೀಸ್ ಠಾಣೆಗಳಿದ್ದವು.
ಬ್ರಿಟಿಷರ ಆಡಳಿತದಲ್ಲಿ ಸ್ವಾತಂತ್ರೃ ಹೋರಾಟಗಾರರನ್ನು ಬಂಧಿಸಲು ಕ್ರಿ.ಶ.1901 ರಲ್ಲಿ ಈ ಕಟ್ಟಡವನ್ನು ನಿರ್ಮಾಣ ಮಾಡಲಾಗಿತ್ತು. ಪೊಲೀಸ್ ಮತ್ತು ಕಂದಾಯ ಇಲಾಖೆಯ ನೂತನ ಕಟ್ಟಡಗಳು ನಿರ್ಮಾಣವಾದ ನಂತರ ಎರಡೂ ಕಚೇರಿಗಳು ಸ್ಥಳಾಂತರಗೊಂಡವು.
ಈ ಕಟ್ಟಡದಲ್ಲಿ ಗ್ರಾಮಾಡಳಿತಾಧಿಕಾರಿ, ಗೃಹರಕ್ಷಕ ದಳ ಹಾಗೂ ನಿವೃತ್ತ ನೌಕರರ ಸಂಘದ ಕಚೇರಿಗಳಿವೆ. ಈ ಕಟ್ಟಡದ ಛಾವಣಿ ಮತ್ತು ಗೋಡೆಗಳಲ್ಲಿ ಗಿಡ-ಬಳ್ಳಿ ಬೆಳೆದು, ಬೇರುಗಳಿಂದ ಗೋಡೆಗಳು ಬಿರುಕು ಬಿಡುತ್ತಿವೆ.
ಖಾಸಗಿ ವ್ಯಕ್ತಿಗಳು ಈ ಕಟ್ಟಡದ ಮುಂಭಾಗ ಹಾಗೂ ರಸ್ತೆ ಬದಿ ಶೆಡ್‌ಗಳನ್ನು ನಿರ್ಮಾಣ ಮಾಡಿ ಬಾಡಿಗೆಗೆ ನೀಡಿದ್ದಾರೆ. ಸರ್ಕಾರಿ ಸ್ಥಳದಲ್ಲಿ ಖಾಸಗಿಯವರು ಶೆಡ್‌ಗಳನ್ನು ನಿರ್ಮಾಣ ಮಾಡಿಕೊಂಡಿದ್ದಲ್ಲದೆ ವ್ಯಾಪಾರಿಗಳಿಗೆ ತಿಂಗಳಿಗೆ ಇಂತಿಷ್ಟು ಹಣ ಎಂದು ವಸೂಲಿ ಮಾಡುತ್ತಿದ್ದಾರೆ.
124 ವರ್ಷ ಹಳೇ ಕಟ್ಟಡ ಕಾಣದಂತೆ ಮುಂಭಾಗದಲ್ಲಿಯೇ ಈ ಶೆಡ್‌ಗಳನ್ನು ನಿರ್ಮಿಸಿಕೊಳ್ಳಲಾಗಿದೆ. ಹೀಗಿದ್ದರೂ ಈತನಕ ಯಾವ ಅಧಿಕಾರಿಗಳು ಈ ಶೆಡ್‌ಗಳನ್ನು ತೆರವುಗೊಳಿಸಿಲ್ಲ.
ಸ್ಮಾರಕವಾಗಿಸಲು ಮುಂದಾಗಲಿ
ತಾಲೂಕಿನ ಇತಿಹಾಸ ಸಾರುವ ಈ ಕಟ್ಟಡವನ್ನು ಸ್ಮಾರಕವಾಗಿಸಬೇಕೆಂಬ ಬೇಡಿಕೆ ಇದೆ. ಬ್ರಿಟಿಷ್ ಆಡಳಿತ ವ್ಯವಸ್ಥೆಯ ಕೇಂದ್ರ ಬಿಂದುವಾಗಿದ್ದ ಈ ಕಟ್ಟಡ ಚರಿತ್ರೆಯನ್ನು ತನ್ನೊಳಗೆ ಅಡಗಿಸಿಕೊಂಡಿದೆ. ಪಟ್ಟಣದ ಹೃದಯ ಭಾಗದಲ್ಲಿರುವ ಈ ಕಟ್ಟಡವನ್ನು ಸ್ವಚ್ಛಗೊಳಿಸಿ ಮುಂದಿನ ಪೀಳಿಗೆಯವರಿಗೆ ನಮ್ಮ ಇತಿಹಾಸದ ಗುರುತನ್ನು ಉಳಿಸಬೇಕಾದ ಅನಿವಾರ್ಯತೆ ಇದೆ.
ತಾಲೂಕಿನ ಇತಿಹಾಸ ಹಾಗೂ ಬ್ರಿಟಿಷರ ಆಡಳಿತ ವ್ಯವಸ್ಥೆಯ ಮಾಹಿತಿ ನೀಡುವ ಹಳೇ ತಾಲೂಕು ಕಚೇರಿಯನ್ನು ಪಾರಂಪರಿಕ ಕಟ್ಟಡ ಎಂದು ಘೋಷಿಸಿ ಸಂರಕ್ಷಿಸಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿ ಅನೇಕ ವರ್ಷಗಳು ಕಳೆದರೂ ಅಧಿಕಾರಿಗಳು ರಕ್ಷಣೆಗೆ ಮುಂದಾಗುತ್ತಿಲ್ಲ. ತಾಲೂಕು ಕೇಂದ್ರದ ಆಡಳಿತ ಸೌಧವಾಗಿದ್ದ ಈ ಕಚೇರಿ ಶಿಥಿಲಗೊಳ್ಳುತ್ತಿದೆ. ಇದನ್ನು ಸಂರಕ್ಷಿಸಿ ಮುಂದಿನ ಪೀಳಿಗೆಯವರಿಗೆ ನಮ್ಮ ಇತಿಹಾಸದ ಗುರುತನ್ನು ಉಳಿಸಬೇಕಾಗಿದೆ.
> ಎಸ್.ಎಸ್.ಪಾಟೀಲ, ಪ್ರಾಧ್ಯಾಪಕ, ಹೂವಿನಹಡಗಲಿ
ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಇಲಾಖೆಯ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಶತಮಾನದ ಹಳೆಯ ಕಟ್ಟಡವನ್ನು ಉಳಿಸಲು ಕ್ರಮ ಕೈಗೊಳ್ಳಲಾಗುವುದು. ಕಚೇರಿ ಮುಂಭಾಗದಲ್ಲಿರುವ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಲು ಪುರಸಭೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು.
> ಸಂತೋಷ್ ಕುಮಾರ್, ತಹಸೀಲ್ದಾರ್, ಹೂವಿನಹಡಗಲಿ