ಹಟ್ಟಿಚಿನ್ನದಗಣಿ: ಹೋಟೆಲ್, ಅಂಗಡಿ ಮತ್ತಿತರರೆಡೆ ದುಡಿಸಿಕೊಳ್ಳುತ್ತಿರುವ ಬಾಲಕ ಕಾರ್ಮಿಕರನ್ನು ಇನ್ನೆರಡು ದಿನಗಳಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಬೇಕು ಎಂದು ಅಧಿಕಾರಿಗಳು ವಿವಿಧ ಹೋಟೆಲ್, ಅಂಗಡಿ ಮಾಲೀಕರಿಗೆ ಶುಕ್ರವಾರ ಎಚ್ಚರಿಕೆ ನೀಡಿದ್ದಾರೆ.
ಲಿಂಗಸುಗೂರು ಸಿಡಿಪಿಒ ಶರಣಮ್ಮ ಕಾರನೂರು, ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿಗಳ ಕಚೇರಿ ವ್ಯವಸ್ಥಾಪಕ ಮಂಜುನಾಥರೆಡ್ಡಿ, ಹಟ್ಟಿ ಠಾಣೆ ಎಎಸೈ ರಹೀಮಾನ್ ಮೊದಲಾದವರು ಇದ್ದ ಅಧಿಕಾರಿಗಳ ತಂಡ ಎರಡು ದಿನಗಳಿಂದ ಪಟ್ಟಣದ ವಿವಿಧ ಹೋಟೆಲ್, ಅಂಗಡಿ ಮತ್ತಿತರೆಡೆ ದಾಳಿ ಮಾಡುತ್ತಿದ್ದು, ಈ ವೇಳೆ ಕೆಲವರು ತಮ್ಮಲ್ಲಿ ಕೆಲಸ ಮಾಡುತ್ತಿರುವ ಬಾಲಕಾರ್ಮಿಕರನ್ನು ಓಡಿಹೋಗಲು ತಿಳಿಸಿದ್ದರಿಂದ ಅವರಿಗೆ ಈ ರೀತಿ ತಾಕೀತು ಮಾಡಿದರು. ಸೂಚನೆಗೆ ವ್ಯತಿರಿಕ್ತವಾಗಿ ನಡೆದುಕೊಂಡರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಹಟ್ಟಿ ಕ್ಯಾಂಪ್, ಪಪಂ ವ್ಯಾಪ್ತಿಯ ಅಂಗಡಿ, ಬೇಕರಿ, ಹೋಟೆಲ್‌ಗಳಲ್ಲಿ ಬಾಲ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿರುವ ಮಾಲೀಕರನ್ನು ಸ್ಥಳಿಯ ಪೊಲೀಸರು ಸುಪರ್ದಿಗೆ ತೆಗೆದುಕೊಂಡು, ನಂತರ ದಂಡ ವಿಧಿಸಿದರು.
ಬಾಲಕಾರ್ಮಿಕರನ್ನು ದುಡಿಸಿಕೊಳ್ಳುತ್ತಿರುವ ವಿವಿಧ ಹೋಟೆಲ್, ಬೇಕರಿ, ಅಂಗಡಿ ಮಾಲೀಕರಿಗೆ ದಂಡ ವಿಧಿಸಲಾಗಿದೆ. ಓಡಿಹೋದ ಬಾಲ ಕಾರ್ಮಿಕರನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಕಡ್ಡಾಯವಾಗಿ ಹಾಜರು ಪಡಿಸುವಂತೆ ಎಚ್ಚರಿಸಲಾಗಿದೆ. ಬಾಲಕಾರ್ಮಿರನ್ನು ನಿಯಂತ್ರಿಸಲು ಸಾರ್ವಜನಿಕರು ಕೂಡ ಸಹಕರಿಸಬೇಕಿದೆ.| ಶರಣಮ್ಮ ಕಾರನೂರು ಲಿಂಗಸುಗೂರು ಸಿಡಿಪಿಓ.