ಜಿಲ್ಲೆ

ಉಡುಪಿ ವಿಶಾಲಾ ಗಾಣಿಗ ಕೊಲೆ ಪ್ರಕರಣ: ಪತಿ ರಾಮಕೃಷ್ಣ ಹಾಗೂ ಬಾಡಿಗೆ ಹಂತಕನೊಬ್ಬನ ಬಂಧನ; ಇನ್ನೊಬ್ಬನಿಗಾಗಿ ಶೋಧ..

ಉಡುಪಿ: ವಿದೇಶದಿಂದ ಊರಿಗೆ ಮರಳಿದ್ದ ವಿಶಾಲಾ ಗಾಣಿಗ ಕೊಲೆ ಪ್ರಕರಣ ಇದೀಗ ಮತ್ತಷ್ಟು ಕುತೂಹಲ ಮೂಡಿಸಿದ್ದು, ಪತಿ ದುಬೈನಲ್ಲಿದ್ದುಕೊಂಡೇ ಕೊಲೆ ಮಾಡಿಸಿರಬಹುದಾ? ಎಂಬ ಅನುಮಾನ ಗಾಢವಾಗಿದೆ. ಈ ಹಿನ್ನೆಲೆಯಲ್ಲಿ ಪತಿ, ಮೂಲತಃ ಬಿಜೂರು ಚಾರುಕೊಡ್ಲು ನಿವಾಸಿ ರಾಮಕೃಷ್ಣ ಗಾಣಿಗ ಹಾಗೂ ಉತ್ತರಪ್ರದೇಶ ಮೂಲದ ಸುಪಾರಿ ಹಂತಕನೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದುಬೈನಿಂದ ಊರಿಗೆ ಮರಳಿದ್ದ ವಿಶಾಲಾ ಗಾಣಿಗ ಜುಲೈ 12ರಂದು ಬ್ರಹ್ಮಾವರ ಸಮೀಪದ ಉಪ್ಪಿಕೋಟೆಯಲ್ಲಿರುವ ತಮ್ಮ ಅಪಾರ್ಟ್‌ ಮೆಂಟ್​​ನಲ್ಲಿ ಕೊಲೆಗೀಡಾಗಿದ್ದರು. ಮೂಲತಃ ಗಂಗೊಳ್ಳಿಯ ನಾಯಕವಾಡಿಯ ನಿವಾಸಿ ಆಗಿರುವ ಇವರು ಉಪ್ಪಿನಕೋಟೆಯಲ್ಲಿ ಅಪಾರ್ಟ್​ಮೆಂಟ್​ ಹೊಂದಿದ್ದಾರೆ. ಅಲ್ಲಿ ಇವರ ಶವ ಕುತ್ತಿಗೆಗೆ ವೈರ್​ ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದು, ಮೊದಲಿಗೆ ಇವರನ್ನು ಆಟೋದಲ್ಲಿ ಮನೆಗೆ ಬಿಟ್ಟಿದ್ದ ಚಾಲಕನ ಮೇಲೆ ಅನುಮಾನ ಮೂಡುವಂತೆ ಮಾಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 3 ಠಾಣೆಗಳ ಪೊಲೀಸರನ್ನು ಒಳಗೊಂಡಂತೆ ನಾಲ್ಕು ತಂಡಗಳನ್ನು ರಚಿಸಿ ತನಿಖೆ ನಡೆಸುವಂತೆ ಉಡುಪಿ ಎಸ್​ಪಿ ವಿಷ್ಣುವರ್ಧನ್​ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ತೀವ್ರ ತನಿಖೆ ನಡೆಸಿ, ಪತಿ ರಾಮಕೃಷ್ಣ ಗಾಣಿಗ ಹಾಗೂ ಬಾಡಿಗೆ ಹಂತಕನೊಬ್ಬನನ್ನು ವಶಕ್ಕೆ ಪಡೆದಿದ್ದಾರೆ.

ಸದ್ಯ ರಾಮಕೃಷ್ಣನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿರುವ ಪೊಲೀಸರು, ಹೆಚ್ಚಿನ ತನಿಖೆಗಾಗಿ ನಾಲ್ಕು ದಿನಗಳ ಕಾಲ ಮತ್ತೆ ತಮ್ಮ ವಶಕ್ಕೆ ಪಡೆದಿದ್ದಾರೆ. ಒಬ್ಬ ಬಾಡಿಗೆ ಹಂತಕನನ್ನು ಉತ್ತರಪ್ರದೇಶದಲ್ಲಿ ಬಂಧಿಸಿರುವ ಪೊಲೀಸರು ಉಡುಪಿಗೆ ಕರೆ ತರುತ್ತಿದ್ದು, ತಲೆಮರೆಸಿಕೊಂಡಿರುವ ಇನ್ನೊಬ್ಬ ಬಾಡಿಗೆ ಹಂತಕನ ಶೋಧದಲ್ಲಿದ್ದಾರೆ. ರಾಮಕೃಷ್ಣ ಗಾಣಿಗ ಇಬ್ಬರು ಸುಪಾರಿ ಹಂತಕರ ಮೂಲಕ ಕೊಲೆ ಮಾಡಿಸಿರುವ ಅನುಮಾನದ ಮೇರೆಗೆ ತನಿಖೆ ತೀವ್ರಗೊಂಡಿದೆ. ಜುಲೈ 23ರಂದು ಆರೋಪಿ ರಾಮಕೃಷ್ಣನನ್ನು ಪೊಲೀಸರು ಮತ್ತೆ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ.

ಉಡುಪಿ ಪೊಲೀಸರ ವಶದಲ್ಲಿ ರಾಮಕೃಷ್ಣ ಗಾಣಿಗ

ಪತಿ ದುಬೈನಲ್ಲಿದ್ದುಕೊಂಡೇ ಬಾಡಿಗೆ ಹಂತಕರ ಮೂಲಕ ಕೊಲೆ ಮಾಡಿಸಿರುವ ಸುಳಿವು ಸಿಕ್ಕಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ರಾಮಕೃಷ್ಣನ ಆಕ್ರಮ ಸಂಬಂಧ, ಆಸ್ತಿ ವ್ಯವಹಾರವೇ ವಿಶಾಲ ಕೊಲೆಗೆ ಕಾರಣ‌ವಾಯಿತಾ? ಎಂಬ ನಿಟ್ಟಿನಲ್ಲಿಯೂ ತನಿಖೆ ಸಾಗಿದೆ. ಪತಿಯನ್ನು ಕೆಲ ದಿನಗಳ ಹಿಂದೆಯೇ ವಶಕ್ಕೆ ಪಡೆದಿರುವ ಪೊಲೀಸರು, ನಿನ್ನೆ ಬಂಧಿಸಿದ್ದಾಗಿ ಮಾಹಿತಿ ನೀಡಿದ್ದಾರೆ.