ಜಿಲ್ಲೆ

ಪತಿಯ ಆಸ್ತಿ ಕೇಳಿದ್ದಕ್ಕೆ ಬಲಿಯಾಯಿತು ಜೀವ

ಚಳ್ಳಕೆರೆ: ಪತಿಯ ಆಸ್ತಿಗಾಗಿ ಕೋರ್ಟ್ ಮೊರೆ ಹೋಗಿದ್ದ ಮಹಿಳೆಯನ್ನು ಗಂಡನ ಅಣ್ಣ ಹಾಗೂ ಆತನ ಮಗ ಸೇರಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ತಾಲೂಕಿನ ಹಾಲಿಗೊಂಡನಹಳ್ಳಿ ಹೊರವಲಯದ ರೇಣುಕಾಗಿರಿಹಟ್ಟಿಯಲ್ಲಿ ಬುಧವಾರ ನಡೆದಿದೆ.

ಈರಕ್ಕ (46) ಕೊಲೆಯಾದ ದುರ್ದೈವಿ. ಸೂರನಹಳ್ಳಿ ಗ್ರಾಮದ ಗೋವಿಂದರಾಜು ಜತೆ ಆಕೆಯ ಮದುವೆಯಾಗಿತ್ತು. ಪತಿಯ ನಿಧನದ ನಂತರ ಕುಟುಂಬದ 30 ಎಕರೆ ಭೂಮಿಯಲ್ಲಿ ತನ್ನ ಗಂಡನ ಪಾಲಿನ 10 ಎಕರೆ ಜಮೀನಿಗಾಗಿ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದರು.

ಕಳೆದ 10 ವರ್ಷಗಳಿಂದ ವಿಚಾರಣೆ ನಡೆಯುತ್ತಿತ್ತು. ತೀರ್ಪು ಈರಕ್ಕ ಪರ ಬರಲಿದೆ ಎಂದು ಅರಿತ ಗಂಡನ ಅಣ್ಣ ಚಂದ್ರಪ್ಪ ಮತ್ತು ಈತನ ಮಗ ಗಂಗಾಧರ ಆಕೆಯ ತವರು ಮನೆಯಾದ ರೇಣುಕಾಗಿರಿಹಟ್ಟಿಗೆ ತೆರಳಿದ್ದರು.

ಅಲ್ಲಿ ಆಕೆಯ ಮೇಲೆ ಕಾರದಪುಡಿ ಎರಚಿ ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದಾರೆ. ತಡೆಯಲು ಬಂದ ತಾಯಿ ಪುಟ್ಟಮ್ಮ ಮತ್ತು ತಂಗಿ ಮಮತಮ್ಮ ಮೇಲೆಯೂ ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ಗ್ರಾಮಸ್ಥರ ನೆರವು: ಹಟ್ಟಿಯಿಂದ ಕಿರುಚಾಟ ಕೇಳುತ್ತಿದ್ದಂತೆ ಗ್ರಾಮಸ್ಥರು ಧಾವಿಸಿದ್ದಾರೆ. ರಕ್ತಸಿಕ್ತ ಮಚ್ಚು ಹಿಡಿದ ತಂದೆ, ಮಗ ಓಡಿ ಹೋಗುವುದನ್ನು ನೋಡಿದ್ದಾರೆ. ಚಂದ್ರಪ್ಪನನ್ನು ಹಿಡಿದು ಕರೆಂಟ್ ಕಂಬಕ್ಕೆ ಕಟ್ಟಿ ಹಾಕಿದ್ದಾರೆ. ಮಗ ಗಂಗಾಧರ್ ತಪ್ಪಿಸಿಕೊಂಡಿದ್ದಾನೆ.

ಘಟನಾ ಸ್ಥಳಕ್ಕೆ ಎಸ್ಪಿ ಧರ್ಮೇಂದ್ರಕುಮಾರ್ ಮೀನಾ, ಎಎಸ್ಪಿ ಎಚ್.ಒ.ಕುಮಾರಸ್ವಾಮಿ, ಪೊಲೀಸ್ ಉಪ ಅಧೀಕ್ಷಕ ಟಿ.ಬಿ.ರಾಜಣ್ಣ ಸೇರಿ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸಿಬ್ಬಂದಿ ಸಹಿತ ಧಾವಿಸಿ, ಸ್ಥಳ ಮಹಜರು ಮತ್ತು ಪಂಚನಾಮೆ ನಡೆಸಿದ್ದಾರೆ. ಪರಶುರಾಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗಂಗಾಧರನಿಗಾಗಿ ಶೋಧ ನಡೆದಿದೆ.

ಘಟನೆಯಲ್ಲಿ ಗಾಯಗೊಂಡ ಪುಟ್ಟಮ್ಮ ಹಾಗೂ ಮಮತಮ್ಮ ಅವರನ್ನು ಚಳ್ಳಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೆಚ್ಚಿದ ಆತಂಕ: ಇತ್ತೀಚೆಗೆ ಚನ್ನಮ್ಮನಾಗತಿಹಳ್ಳಿಯಲ್ಲಿ ದಂಪತಿ ಗಲಾಟೆ ಕೋರ್ಟ್ ಮೆಟ್ಟಿಲೇರಿತ್ತು. ಹೆಂಡತಿಯ ಪರವಾಗಿ ವಿಚ್ಛೇದನ ತೀರ್ಪು ಬರಲಿದೆ ಎಂದು ತಿಳಿದ ಗಂಡ ಕೋರ್ಟ್‌ಗೆ ತೆರಳಬೇಕಿದ್ದ ದಿನ ಚಳ್ಳಕೆರೆಯ ಸಾರಿಗೆ ಬಸ್ ನಿಲ್ದಾಣದಲ್ಲಿ ಪತ್ನಿ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದ. ಈ ಘಟನೆ ಮಾಸುವ ಮುನ್ನವೇ ನಡೆದ ಕೊಲೆ ಪ್ರಕರಣ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ.