ಬೆಂಗಳೂರು: ಪತಿಯಿಂದ ಪತ್ನಿಗೆ ಕಿರುಕುಳ ಆಗಿರುವ ಪ್ರಕರಣಗಳು ತೀರಾ ಸಾಮಾನ್ಯ. ಆದರೆ ಇಲ್ಲಿ ಪತ್ನಿಯಿಂದಲೇ ಪತಿ ಕಿರುಕುಳ ಅನುಭವಿಸಿದ್ದು, ಅದನ್ನು ತಾಳಲಾರದೆ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಂಗಳೂರಿನ ಪಾದರಾಯನಪುರದಲ್ಲಿ ಈ ಘಟನೆ ನಡೆದಿದೆ.
ಬೆಂಗಳೂರಿನ ರಾಯಪುರ ನಿವಾಸಿ ಮಹಮದ್ ಸಲ್ಮಾನ್ ಖಾತ್ ಮೃತಪಟ್ಟವರು. ಸಲ್ಮಾನ್ ಕಳೆದೆರಡು ವರ್ಷಗಳ ಹಿಂದೆ ರೊಹಿನಾಜ್ ಎಂಬಾಕೆಯನ್ನು ಮದುವೆಯಾಗಿದ್ದು, ನಂತರ ಇಬ್ಬರ ಮಧ್ಯೆ ವಿರಸ ಮೂಡಿತ್ತು. ಹೆರಿಗೆಗೆಂದು ತಾಯಿ ಮನೆಗೆ ಹೋಗಿದ್ದ ಆಕೆ ಬರಲು ನಿರಾಕರಿಸುತ್ತಿದ್ದಳು.
ಇದನ್ನೂ ಓದಿ: ಪ್ರಿಯಕರನನ್ನು ಹುಡುಕಿಕೊಂಡು ರಾತ್ರಿಯೇ ಆತನ ಮನೆಗೆ ಹೋದ ಪ್ರೇಯಸಿ; ಆ ನಂತರ ನಡೆದಿದ್ದಂತೂ ಬೆಚ್ಚಿಬೀಳಿಸುವಂಥದ್ದು!
ಪತಿ ಮದ್ಯವ್ಯಸನಿಯಾಗಿದ್ದು ತಾನು ಆತನ ಮನಗೆ ಹೋಗುವುದಿಲ್ಲ ಎಂದು ಆಕೆ ಎರಿಕ್ ಹ್ಯೂಮನ್ ಆರ್ಗನೈಸೇಷನ್ ಎಂಬ ಎನ್ಜಿಒಗೆ ದೂರು ನೀಡಿದ್ದಳು. ಮನೆಗೆ ಬರಬೇಕಿದ್ದರೆ 20 ಲಕ್ಷ ರೂಪಾಯಿ ಬಾಂಡ್ ಬರೆದುಕೊಡಬೇಕು ಎಂದು ಷರತ್ತು ವಿಧಿಸಿದ್ದಲ್ಲದೆ, ತಪ್ಪಿದರೆ ವಿಚ್ಛೇದನ ನೀಡುವಂತೆ ರೊಹಿನಾಜ್ ಆಗ್ರಹಿಸಿದ್ದಳು ಎನ್ನಲಾಗಿದೆ. ಜತೆಗೆ ಎನ್ಜಿಒನವರು ಕೂಡ 20 ಲಕ್ಷ ರೂ. ಬಾಂಡ್ ಬರೆದುಕೊಡುವಂತೆ ಪದೇಪದೆ ಕರೆ ಮಾಡುತ್ತಿದ್ದರು. ಹೀಗಾಗಿ ಸಲ್ಮಾನ್ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿ ಜಗಜೀವನ್ರಾಮ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.