ವಿವಾಹಿತ ಮಹಿಳೆಯೊಬ್ಬಳ ಶವ ಕೊಲೆಯಾದ ರೀತಿಯಲ್ಲಿ ಪತ್ತೆಯಾಗಿರುವ ಘಟನೆ ತಾಲೂಕಿನ ಮಂಗಾಡಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ. ಆಕೆಯ ಪತಿಯೇ ಕೊಲೆ ಮಾಡಿದ್ದಾನೆ ಎಂಬ ಶಂಕೆಯೂ ವ್ಯಕ್ತವಾಗಿದೆ.
ಅಶ್ವಿನಿ (30) ಕೊಲೆಯಾಗಿರುವ ಗೃಹಿಣಿ. ಬ್ರಹ್ಮಣೀಪುರ ಗ್ರಾಮದ ಈಕೆಯನ್ನು ಕೆಲವರ್ಷಗಳ ಹಿಂದೆ ಮಂಗಾಡಹಳ್ಳಿ ಗ್ರಾಮದ ರಮೇಶ್ ಎಂಬಾಂತನಿಗೆ ಮದುವೆ ಮಾಡಿಕೊಡಲಾಗಿತ್ತು. ಗ್ರಾಮದ ಹೊರ ವಲಯದ ಹಳ್ಳದಲ್ಲಿ ಈಕೆಯ ಶವ ಬುಧವಾರ ಬೆಳಿಗ್ಗೆ ಪತ್ತೆಯಾಗಿದ್ದು, ಮಂಗಳವಾರ ರಾತ್ರಿಯೇ ಯಾವುದೋ ಆಯುಧದಿಂದ ಈಕೆಯನ್ನು ಕೊಲೆಮಾಡಿ, ಹಳ್ಳಕ್ಕೆ ತಂದು ಹಾಕಲಾಗಿದೆ.
ದಂಪತಿ ನಡುವೆ ಹಣಕಾಸಿನ ವಿಚಾರಕ್ಕೆ ಮಂಗಳವಾರ ರಾತ್ರಿ ಜಗಳವಾಗಿದ್ದು, ಯಾವುದೋ ಆಯುಧದಿಂದ ಪತ್ನಿಯನ್ನು ಮನೆಯಲ್ಲೇ ಕೊಲೆ ಮಾಡಿ ಶವವನ್ನು ಹಳ್ಳದ ಪಕ್ಕಕ್ಕೆ ಪತಿ ತಂದು ಹಾಕಿದ್ದಾನೆ ಎನ್ನಲಾಗಿದ್ದು, ಸದ್ಯ ಆತ ತಲೆಮರಿಸಿಕೊಂಡಿದ್ದಾನೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಡಿವೈಎಸ್ಪಿ ಗಿರಿ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆರಳಚ್ಚು ಹಾಗೂ ಶ್ವಾನದಳದ ಸಿಬ್ಬಂದಿಗಳು ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕೆಂಗೇರಿಯ ರಾಜರಾಜೇಶ್ವರಿ ಆಸ್ಪತ್ರೆಗೆ ರವಾನಿಸಲಾಗಿದೆ.