ಬೆಂಗಳೂರು: ಸಂಸಾರದಲ್ಲಿ ಹೊಂದಾಣಿಕೆಯಾಗದೆ ಮೊದಲ ಪತಿಗೆ ವಿಚ್ಛೇದನ ನೀಡಿ ಜೀವನದಲ್ಲಿ ಜಿಗುಪ್ಸೆ ಹೊಂದಿದ್ದ ಖಾಸಗಿ ಕಂಪನಿಯ ಮಹಿಳಾ ಉದ್ಯೋಗಿಯೊಬ್ಬರು ಸಹೋದ್ಯೋಗಿ ಮಾತಿಗೆ ಮರುಳಾಗಿ ಸಪ್ತಪದಿ ತುಳಿದು, ಈಗ ಆತನಿಂದ ಬ್ಲ್ಯಾಕ್ವೆುೕಲ್ಗೆ ಒಳಗಾಗಿ ಪೇಚಿಗೆ ಸಿಲುಕಿದ್ದಾರೆ.
ಸದ್ಯ 20 ಲಕ್ಷ ರೂ.ಗೆ ಬೇಡಿಕೆಯಿಟ್ಟಿರುವ ಎರಡನೇ ಪತಿ, ನೀಡದಿದ್ದರೆ ಮಹಿಳೆಯ ಖಾಸಗಿ ಕ್ಷಣಗಳ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ, ಸ್ನೇಹಿತರಿಗೆ ಕಳಿಸುವುದಾಗಿ ಬೆದರಿಕೆ ಹಾಕುತ್ತಿದ್ದಾನೆ. ಏನು ಮಾಡಬೇಕೆಂದು ತೋಚದೆ ಸಂತ್ರಸ್ತೆ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ.
ಪ್ರತಿಷ್ಠಿತ ಖಾಸಗಿ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿರುವ ಬನಶಂಕರಿ ನಿವಾಸಿ 37 ವರ್ಷದ ಮಹಿಳೆಗೆ 13 ವರ್ಷದ ಮಗಳಿದ್ದು, ಮೊದಲ ಪತಿಯೊಂದಿಗೆ ಸಂಸಾರದಲ್ಲಿ ಹೊಂದಾಣಿಕೆಯಾಗದ ಕಾರಣ ಕೆಲ ವರ್ಷಗಳ ಹಿಂದೆ ವಿಚ್ಛೇದನ ಪಡೆದುಕೊಂಡಿದ್ದರು. ಇದಾದ ಬಳಿಕ ಜೀವನದಲ್ಲಿ ಜಿಗುಪ್ಸೆ ಹೊಂದಿ ಖಿನ್ನತೆಗೆ ಒಳಗಾಗಿದ್ದರು. ಆದರೂ, ಮಗಳ ಭವಿಷ್ಯದ ಹಿತ ದೃಷ್ಟಿಯಿಂದ ಖಾಸಗಿ ಕಂಪನಿಯೊಂದರಲ್ಲಿ ದುಡಿದು ಜೀವನ ನಡೆಸುತ್ತಿದ್ದರು.
ಲಿವ್ಇನ್ ರಿಲೇಷನ್ಶಿಪ್: 2018ರಲ್ಲಿ ಮಹಿಳೆ ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ಕಾರ್ಯ ನಿರ್ವಹಿಸುತ್ತಿದ್ದ ಮದನ್ ಎಂಬಾತನ ಪರಿಚಯ ವಾಗಿತ್ತು. ಮಹಿಳೆ ಪತಿಯಿಂದ ವಿಚ್ಛೇದನ ಪಡೆದ ವಿಚಾರ ಸ್ನೇಹಿತರು ಹಾಗೂ ಮದನ್ಗೆ ಗೊತ್ತಿತ್ತು. 2018ರಲ್ಲಿ ಮಹಿಳೆ ಬಳಿ ಪ್ರೇಮ ನಿವೇದನೆ ಮಾಡಿದ ಮದನ್, ವಿವಾಹವಾಗುವುದಾಗಿ ಹೇಳಿದ್ದ. ಆದರೆ, ದೂರುದಾರ ಮಹಿಳೆ ಈತನ ಪ್ರೇಮ ನಿವೇದನೆ ತಿರಸ್ಕರಿಸಿದ್ದರು. ಒಂದು ಬಾರಿ ವಿಚ್ಛೇದನ ಪಡೆದು ಬಹಳಷ್ಟು ನೊಂದಿದ್ದು, ತೊಂದರೆ ನೀಡದಂತೆ ಕೋರಿಕೊಂಡಿದ್ದರು. ಇಷ್ಟಕ್ಕೆ ಸುಮ್ಮನಾಗದ ಮದನ್ ವಿವಾಹವಾಗುವಂತೆ ಮಹಿಳೆ ಬೆನ್ನು ಬಿದ್ದು, ನಿಮ್ಮನ್ನು ಹಾಗೂ ನಿಮ್ಮ ಮಗಳನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿ ಆಶ್ವಾಸನೆ ನೀಡಿದ್ದ. ಕೊನೆಗೂ ಈತನ ಮಾತಿಗೆ ಮರುಳಾದ ಮಹಿಳೆ ವಿವಾಹವಾಗಲು ಒಪ್ಪಿದ್ದರು. ಇದಾದ ಬಳಿಕ ಕೆಲ ಸಮಯ ಇಬ್ಬರೂ ಲಿವಿಂಗ್ ರಿಲೇಷನ್ಶಿಪ್ನಲ್ಲಿ ವಾಸಿಸುತ್ತಿದ್ದರು.
ವರಸೆ ಬದಲಿಸಿದ ಪತಿ: 2019ರ ಡಿ.5ರಂದು ಮಹಾಲಕ್ಷ್ಮೀ ಲೇಔಟ್ನ ದೇವಾಲಯವೊಂದರಲ್ಲಿ ಸ್ನೇಹಿತರ ಸಮ್ಮುಖದಲ್ಲಿ ಇಬ್ಬರೂ ವಿವಾಹವಾಗಿದ್ದರು. ನಂತರ ಗಾಂಧಿನಗರ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಸಿಕೊಂಡಿದ್ದರು. ಇದಾದ ಕೆಲ ಸಮಯದ ಬಳಿಕ ಮದನ್ ಮನೆಯವರಿಗೆ ವಿವಾಹವಾದ ವಿಚಾರ ಗೊತ್ತಾಗಿತ್ತು. ಈತನ ಸಹೋದರರು ಆತನಿಗೆ ಬೇರೆ ಹುಡುಗಿ ಜತೆಯಲ್ಲಿ ನಿಶ್ಚಿತಾರ್ಥ ಮಾಡಲು ಮುಂದಾಗಿದ್ದರು. ನೀನು ಆತನಿಂದ ದೂರವಿದ್ದರೆ ಒಳ್ಳೆಯದು. ಆತನೊಂದಿಗೆ ಸಂಸಾರ ಮಾಡಬೇಕೆಂದರೆ 25 ಲಕ್ಷ ರೂ. ಕೊಡಬೇಕು ಎಂದು ಸಂತ್ರಸ್ತ ಮಹಿಳೆಗೆ ಬೆದರಿಸಿದ್ದರು.
ಪತ್ನಿಯ ಗಮನಕ್ಕೆ ಬಾರದಂತೆ ಆಕೆಯ ಖಾಸಗಿ ಕ್ಷಣದ ಫೋಟೊವನ್ನು ಮೊಬೈಲ್ನಲ್ಲಿ ಮದನ್ ಸೆರೆ ಹಿಡಿದಿದ್ದ. ನಂತರ 25 ಲಕ್ಷ ರೂ.ಗಳನ್ನು ಕೊಡುವಂತೆ ಪತ್ನಿಗೆ ಬೇಡಿಕೆಯಿಟ್ಟಿದ್ದ. ಜತೆಗೆ ನಿನ್ನ ಮಗಳು ನಮ್ಮ ಜತೆ ಇರಬಾರದು ಎಂದು ಬೆದರಿಸಿದ್ದ. ಈ ಬಗ್ಗೆ ಪ್ರಶ್ನಿಸಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಪತ್ನಿ ಮೇಲೆ ಹಲ್ಲೆ ಮಾಡಿ ಮನೆ ಬಿಟ್ಟು ಹೋಗಿದ್ದ. ನೊಂದ ಪತ್ನಿ ತಾನು ಕೆಲ ವರ್ಷಗಳಿಂದ ಕೂಡಿಟ್ಟ 3 ಲಕ್ಷ ರೂ.ಗಳನ್ನು ಮದನ್ಗೆ ಕೊಟ್ಟಿದ್ದಳು.
ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಬ್ಲ್ಯಾಕ್ವೆುೕಲ್: ಇತ್ತೀಚೆಗೆ ಪತ್ನಿ ಕೆಲಸಕ್ಕೆ ಹೋದ ಸಮಯ ನೋಡಿ ಮನೆಗೆ ಬಂದ ಮದನ್, ಮನೆಯಲ್ಲಿದ್ದ ಚಿನ್ನಾಭರಣ, ಡೆಬಿಟ್ಕಾರ್ಡ್ ತೆಗೆದುಕೊಂಡು ಹೋಗಿದ್ದ. ಕರೆ ಮಾಡಿ ಕೇಳಿದಾಗ ನನ್ನ ತಂಟೆಗೆ ಬಂದರೆ ನಿನ್ನ ಜತೆ ಕಳೆದ ಖಾಸಗಿ ಕ್ಷಣದ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿ ನಿನ್ನ ಸ್ನೇಹಿತರಿಗೆ ಕಳಿಸುತ್ತೇನೆ. ಈ ರೀತಿ ಮಾಡಬಾರದೆಂದರೆ 20 ಲಕ್ಷ ರೂ. ಕೊಡಬೇಕು ಎಂದು ಬೆದರಿಸುತ್ತಿದ್ದಾನೆ. ಮದನ್ ಬಳಿಯಿದ್ದ ತನ್ನ ಖಾಸಗಿ ಕ್ಷಣಗಳ ಫೋಟೊ ನೋಡಿ ಬೆಚ್ಚಿಬಿದ್ದ ಪತ್ನಿ ದಿಕ್ಕು ತೋಚದೆ ಪೊಲೀಸರ ಮೊರೆ ಹೋಗಿದ್ದಾಳೆ. ಗಿರಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
|ಅವಿನಾಶ ಮೂಡಂಬಿಕಾನ ಬೆಂಗಳೂರು