ಚಿಕ್ಕಮಗಳೂರು: ಭದ್ರಾ ವನ್ಯಜೀವಿ ವಿಭಾಗದ ಹೆಬ್ಬೆ ವಲಯದ ಕೋಧಿ ಬೇಟೆ ನಿಗ್ರಹ ಶಿಬಿರದ ವ್ಯಾಪ್ತಿಯಲ್ಲಿ ಎರಡು ಉಡಗಳನ್ನು ಬೇಟೆಯಾಡಿದ್ದ ಆರೋಪದಲ್ಲಿ ಇಬ್ಬರನ್ನು ವನ್ಯಜೀವಿ ವಿಭಾಗದ ಸಿಬ್ಬಂದಿ ಶುಕ್ರವಾರ ಬಂಧಿಸಿ ವನ್ಯಜೀವಿ ಕಾಯ್ದೆ 1972ರ ಅಡಿ ಪ್ರಕರಣ ದಾಖಲಿಸಿದ್ದಾರೆ.
ಕೋಧಿ ಗ್ರಾಮದವರೇ ಆದ ಆರ್.ಚಂದ್ರೇಶ ಹಾಗೂ ಕೆ.ಎಂ.ರವಿ ಬಂಧಿತ ಆರೋಪಿಗಳು. ಬೇಟೆಯಾಡಿದ್ದ ಉಡಗಳ ದೇಹ, ಕತ್ತಿ ಮತ್ತಿತರ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ವಲಯಾರಣ್ಯಾಧಿಕಾರಿ ಕಿರಣ್ ನಿರ್ದೇಶನದಲ್ಲಿ ಉಪ ವಲಯಾರಣ್ಯಾಧಿಕಾರಿ ಕೃಷ್ಣಮೂರ್ತಿ, ಅರಣ್ಯ ರಕ್ಷಕರಾದ ರಂಜಿತ್ ಮತ್ತು ಕೃಷ್ಣಮೂರ್ತಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.