ಹುಣಸೂರು : ಸಂಗೊಳ್ಳಿ ರಾಯಣ್ಣ ಸರ್ಕಾರಿ ನೌಕರರ ಸಂಘ ಮತ್ತು ಕಾವೇರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ 250ಕ್ಕು ಹೆಚ್ಚು ವಿದ್ಯಾರ್ಥಿಗಳಿಗೆ ಮತ್ತು ಮೆಡಿಕಲ್ ಸೀಟ್ ಪಡೆದುಕೊಂಡ 10ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು.
ಶನಿವಾರ ನಗರದ ಕನಕ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್, ಸರ್ಕಾರ ಮತ್ತು ಸಮಾಜ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತದೆ. ಪ್ರತಿಯೊಬ್ಬ ಎಂಬಿಬಿಎಸ್ ವಿದ್ಯಾರ್ಥಿ ತನ್ನ ವ್ಯಾಸಂಗ ಪೂರ್ಣಗೊಳಿಸಲು ಅನುಕೂಲವಾಗುವಂತೆ ಸರ್ಕಾರಗಳು 12ಲಕ್ಷ ರೂ.ಗಳನ್ನು ವ್ಯಯಿಸುತ್ತದೆ. ಸಮಾಜ ನಿಮ್ಮ ಏಳಿಗೆಗಾಗಿ ಸಹಕಾರ ನೀಡುತ್ತದೆ. ಹೀಗಿರುವಾಗ ಮೆಡಿಕಲ್ ಓದಿದ ವಿದ್ಯಾರ್ಥಿಗಳು ಉದ್ಯೋಗ ಗಳಿಸಿದ ನಂತರ ಜನರೊಂದಿಗೆ ಬೆರೆತು ಕಾರ್ಯ ನಿರ್ವಹಿಸಬೇಕು ಎಂದರು.
ನಿಮ್ಮ ಸಾಧನೆಯ ಋಣ ಈ ಸರ್ಕಾರ ಮತ್ತು ಸಮುದಾಯಗಳ ಮೇಲಿದೆ ಎನ್ನುವ ಅರಿವು ನಿಮಗಿರಬೇಕು. ಮುಂದಿನ 10ವರ್ಷ ಪೈಪೋಟಿ ಎನ್ನುವುದು ಸಂಪೂರ್ಣ ಬದಲಾಗಲಿದೆ. ಕೃತಕ ಬುದ್ಧಿಮತ್ತೆ(ಎಐ) ನಮ್ಮ ಸುತ್ತಮುತ್ತ ತುಂಬಿಕೊಳ್ಳಲಿದೆ. ಅದಕ್ಕೆ ತಕ್ಕಂತೆ ನಾವು ಮುಂದಿನ ಪೀಳಿಗೆಯನ್ನು ಸಿದ್ಧಪಡಿಸಬೇಕಿದೆ. ವಿದ್ಯಾರ್ಥಿಗಳಲ್ಲಿ ಸಾಮಾನ್ಯ ಜ್ಞಾನದ ತಿಳಿವು ಹೆಚ್ಚಬೇಕು ಎಂದರು. ದುರಂತದ ಸಂಗತಿಯೆಂದರೆ ಸರ್ಕಾರಿ ಶಾಲೆಗಳು ಮುಚ್ಚುವ ಹಂತದಲ್ಲಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಬೇಸರಿಸಿದರು.
ಶ್ಲಾಘನೀಯ ಕಾರ್ಯ: ಗಾವಡಗೆರೆ ಶ್ರೀ ಗುರುಲಿಂಗ ಜಂಗಮದೇವರ ಮಠದ ಶ್ರೀ ನಟರಾಜ ಸ್ವಾಮೀಜಿ ಆಶೀರ್ವಚನ ನೀಡಿ, ಇಂದು ಎಲ್ಲ ಸಮುದಾಯಗಳು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು. ಸದೃಢ ಯುವಸಮೂಹದಿಂದ ಮಾತ್ರ ಸಶಕ್ತ ದೇಶ ಕಟ್ಟಲು ಸಾಧ್ಯ. ಮನುಷ್ಯ ಮನುಷ್ಯರ ನಡುವೆ ಸುಮಧುರ ಸಂಬಂಧಗನ್ನು ಬೆಸೆಯುವ ಕಾರ್ಯ ನಡೆಸೋಣ ಎಂದರು. ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಮನುಷ್ಯ ಸಂಬಂಧಗಳನ್ನು ಹೊಸಕಿಹಾಕುವ ಕಾರ್ಯ ಆಗಬಾರದು ಎಂದರು.
ಆರ್ಥಿಕ ಸಹಾಯ : ಕಾವೇರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ.ಲೋಹಿತ್ ಮಾತನಾಡಿ, ಸಮಾಜದ ಯಾವುದೇ ವಿದ್ಯಾರ್ಥಿಗೆ ವ್ಯಾಸಂಗಕ್ಕೆ ಆರ್ಥಿಕ ಸಹಾಯ ಸೇರಿದಂತೆ ಯಾವುದೇ ಅಡ್ಡಿಆತಂಕಗಳು ಎದುರಾದರೆ ನನ್ನ ಆಸ್ಪತ್ರೆ ಬಾಗಿಲು ಸದಾ ತೆರೆದಿರುತ್ತದೆ ಎಂದರು.
ಸಂಗೊಳ್ಳಿ ರಾಯಣ್ಣ ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ಹುಣಸೂರು, ಪಿರಿಯಾಪಟ್ಟಣ, ಎಚ್.ಡಿ.ಕೋಟೆ ಮತ್ತು ಕೆ.ಆರ್.ನಗರ ತಾಲೂಕಿನ 250ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಗುರುತಿಸಿ ಈವರೆಗೆ ಪ್ರತಿಭಾ ಪುರಸ್ಕಾರ ನೀಡಲಾಗಿದೆ ಎಂದರು.
ನಗರಸಭೆ ಸದಸ್ಯ ಗಣೇಶ್ ಕುಮಾರಸ್ವಾಮಿ ಮಾತನಾಡಿದರು. ಕೆ.ಆರ್.ನಗರ ಕುರುಬ ಸಮಾಜದ ಅಧ್ಯಕ್ಷ ಶಿವಣ್ಣ, ಪಿರಿಯಾಪಟ್ಟಣದ ಆನಂದ್, ಮುಂಖಡರಾದ ಪ್ರಭಾಕರ ಹೆಗ್ಗಡೆ, ಬೀರೇಶ್ವರ, ಚಂದ್ರೇಗೌಡ, ಪರಮೇಶ್ವರ್, ತರೀಕಲ್ ರಾಜು, ಇಂಟೆಕ್‌ರಾಜು, ಕರಣಕುಪ್ಪೆ ಗಣಪತಿ, ವಾಸೇಗೌಡ, ಸಣ್ಣೇಗೌಡ, ನವೀನ್ ರೈ, ಹಿರೀಕ್ಯಾತನಹಳ್ಳಿ ಲೋಕೇಶ್ ಸೇರಿದಂತೆ ವಿದ್ಯಾರ್ಥಿಗಳು ಮತ್ತು ಪಾಲಕರು ಹಾಜರಿದ್ದರು.