ನಿಪ್ಪಾಣಿ ತಾಲೂಕಿನ ಹುನ್ನರಗಿ ಗ್ರಾಮದಲ್ಲಿ ಸ್ಥಾಪಿಸಿದ ಕಾಳಜಿ ಕೇಂದ್ರಕ್ಕೆ ಸಂತ್ರಸ್ತರನ್ನು ಸ್ಥಳಾಂತರಿಸಲಾಯಿತು. 
ಜಿಲ್ಲೆ

ಹುನ್ನರಗಿ, ಸಿದ್ನಾಳದಲ್ಲಿ ಗಂಜಿ ಕೇಂದ್ರ ಪ್ರಾರಂಭ

ಶಂಕರ ಗೆಜ್ಜಿ

ನಿಪ್ಪಾಣಿ: ವೇದಗಂಗಾ ನದಿ ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಹುನ್ನರಗಿ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಗ್ರಾಮಸ್ಥರು ಹಾಗೂ ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ಗ್ರಾಮದ 41 ಕುಟುಂಬಗಳಲ್ಲಿ ಒಟ್ಟು 89 ಜನರು ಸ್ಥಳಾಂತರಗೊಂಡಿದ್ದಾರೆ. ಅವರಲ್ಲಿ 26 ಕುಟುಂಬಗಳು ಗ್ರಾಮದ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಸ್ಥಾಪಿಸಿದ ಗಂಜಿ ಕೇಂದ್ರದಲ್ಲಿ ಸ್ಥಳಾಂತರಗೊಂಡರೆ, ಇನ್ನುಳಿದ 15 ಕುಟುಂಬಗಳು ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ.

ಹುನ್ನರಗಿ ಪಕ್ಕದ ಸಿದ್ನಾಳ ಗ್ರಾಮದಲ್ಲಿ ಕೂಡ 4 ಕುಟುಂಬಗಳನ್ನು ಸ್ಥಳಾಂತರಿಸಲಾಗಿದ್ದು, ಆ ಕುಟುಂಬಗಳು ಸಂಬಂಧಿಕರ ಮನೆಗೆ ತೆರಳಿದ್ದಾರೆ. ಗ್ರಾಮದ ಸರ್ಕಾರಿ ಮರಾಠಿ ಗಂಡು ಮಕ್ಕಳ ಶಾಲೆಯಲ್ಲಿ ಗಂಜಿ ಕೇಂದ್ರ ಆರಂಭಿಸಲಾಗಿದೆ ಎಂದು ತಹಸೀಲ್ದಾರ್ ಮುಜಫ್ಫರ್ ಬಳಿಗಾರ ತಿಳಿಸಿದ್ದಾರೆ.
ನಿಪ್ಪಾಣಿ ನಗರಕ್ಕೆ ಕುಡಿಯುವ ನೀರು ಪೂರೈಸುವ 46 ಅಡಿ ಸಾಮರ್ಥ್ಯದ ಬೃಹತ್ ಜವಾಹರ ಜಲಾಶಯ ತುಂಬಿ ಹರಿಯುತ್ತಿದೆ. ಶುಕ್ರವಾರ ಬೆಳಗ್ಗೆ ಲೋಕೋಪಯೋಗಿ ಇಲಾಖೆಯಲ್ಲಿ 58 ಮಿ.ಮೀ., ಕೃಷಿ ಸಂಶೋಧನಾ ಕೇಂದ್ರದಲ್ಲಿ 61 ಮಿ.ಮೀ., ಸೌಂದಲಗಾ ಗ್ರಾಮದಲ್ಲಿ 52 ಮಿ.ಮೀ. ಮತ್ತು ಗಳತಗಾ ಗ್ರಾಮದಲ್ಲಿ 74 ಮಿ.ಮೀ. ಮಳೆ ಸುರಿದಿದೆ.