ಜಿಲ್ಲೆ

ಒತ್ತುವರಿ ತೆರವು ವೇಳೆ ನೂರಾರು ಮರಗಳ ಹನನ

ಪ್ರಸಿನ್ ಕೆ.ಆರ್

ಮದ್ದೂರು: ಜಮೀನು ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ನೂರಾರು ಮರಗಳನ್ನು ಹನನಗೊಳಿಸಲಾಗಿದೆ ಎಂದು ತಾಲೂಕಿನ ಆತಗೂರು ಹೋಬಳಿಯ ಮಾದನಾಯಕನಹಳ್ಳಿ ಗ್ರಾಮದ ಪ್ರಗತಿಪರ ರೈತ ಎಂ.ಕೆ.ದೇವರಾಜು ಆರೋಪಿಸಿದ್ದಾರೆ.

ಒತ್ತುವರಿ ತೆರವು ವೇಳೆ ನೂರಾರು ಬಗೆಯ ಮರಗಳನ್ನು ನೆಲಕ್ಕುರುಳಿಸಿದ್ದು ಇದರಿಂದಾಗಿ ಲಕ್ಷಾಂತ ರೂ. ಮೌಲ್ಯದ ನಷ್ಟುವುಂಟಾಗಿದ್ದು, ತಾಲೂಕು ಆಡಳಿತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.

ಗ್ರಾಮದ ಸರ್ಕಾರಿ ಜಮೀನಿನಲ್ಲಿರುವ ಬಂಡಿದಾರಿಯನ್ನು ತೆರವುಗೊಳಿಸುವ ವೇಳೆ ರೈತನ ಗಮನಕ್ಕೆ ತಾರದೆ, ಯಾವುದೇ ನೋಟಿಸ್ ಜಾರಿಗೊಳಿಸದೆ ಹಾಗೂ ಕಾಲಾವಕಾಶವನ್ನು ನೀಡದೆ ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಸಿಬ್ಬಂದಿಗಳು ಏಕಾಏಕಿ ಜೆಸಿಬಿ ಯಂತ್ರದ ಮೂಲಕ ಕಾರ್ಯಾಚರಣೆ ಕೈಗೊಂಡು ಜಮೀನಿನಲ್ಲಿದ್ದ ಶ್ರೀಗಂಧ, ಕರಿಬೇವು, ಹಲಸಿನಮರ, ಆಲದಮರ, ಬೇವಿನಮರ ಸೇರಿದಂತೆ ಇತರೆ ಮರಗಳನ್ನು ನೆಲಕ್ಕುರುಳಿಸಿದ್ದಾರೆ.

ತೆರವು ಕಾರ್ಯಾಚರಣೆ ವೇಳೆ ಜಮೀನಿನ ಬಳಿಯಿದ್ದ ನೀರಿನ ಪೈಪ್‌ಲೈನ್ ಹಾಗೂ ತಂತಿಬೇಲಿಯನ್ನು ಸಂಪೂರ್ಣವಾಗಿ ಹಾಳುಗೆಡವಿದ್ದು ಇದರಿಂದಾಗಿ ತಮಗೆ ಲಕ್ಷಾಂತರ ರೂ. ಮೌಲ್ಯದ ನಷ್ಟವುಂಟಾಗಿದ್ದು ಅಧಿಕಾರಿಗಳು ತಮಗೆ ಕಾಲಾವಕಾಶ ನೀಡಿದ್ದರೆ ಅಥವಾ ನೋಟಿಸ್ ಜಾರಿಗೊಳಿಸಿದ್ದರೆ ತಾವೇ ಪರ್ಯಾಯ ವ್ಯವಸ್ಥೆಯನ್ನು ಕೈಗೊಳ್ಳುತ್ತಿದ್ದಾಗಿ ಪತ್ರಿಕೆಗೆ ತಿಳಿಸಿದರು.

ತಾಲೂಕು ಆಡಳಿತ ಪರಿಹಾರ ನೀಡದಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ದೂರು ನೀಡುವುದಾಗಿ ತಿಳಿಸಿದ್ದಾರೆ.