ಜಿಲ್ಲೆ

ಹೈಟೆಕ್ ಬಸ್‌ನಿಲ್ದಾಣದಲ್ಲಿ ನೂರಾರು ಸಮಸ್ಯೆ

ಗಂಗಾಧರ ಬಿ ವಿ

ಚನ್ನಪಟ್ಟಣದ ಸಾರಿಗೆ ಸಂಸ್ಥೆ ನಿಲ್ದಾಣದಲ್ಲಿ ತಪ್ಪದ ಕಳ್ಳ ಕಾಕರ ಕಾಟ ನಾಯಿಗಳ ಉಪಟಳ ಪಾರ್ಕಿಂಗ್ ಅವ್ಯವಸ್ಥೆ

ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ಒಂದು ಕಾಲದಲ್ಲಿ ಹೈಟೆಕ್ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ನಗರದ ಸರ್ಕಾರಿ ಬಸ್ ನಿಲ್ದಾಣ ಪ್ರಸುತ್ತ ಹಲವಾರು ಸಮಸ್ಯೆಗಳಿಂದ ನಲುಗುತ್ತಿದೆ.

ಹೌದು.., ನಗರದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಹಲವಾರು ಅವ್ಯವಸ್ಥೆ ತಾಂಡವವಾಡುತ್ತಿದೆ.

ನಗರದ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿರುವ ಈ ನಿಲ್ದಾಣ ಆರಂಭದಲ್ಲಿ ಹೈಟೆಕ್ ನಿಲ್ದಾಣವೆಂದೇ ಹೆಗ್ಗಳಿಕೆ ಪಡೆದಿತ್ತು. ಆದರೆ, ಕೆಲ ವರ್ಷಗಳಿಂದ ಹಲವಾರು ಸಮಸ್ಯೆಗಳಿಂದ ಈ ನಿಲ್ದಾಣ ಬಳಲುತ್ತಿದ್ದು, ಸೂಕ್ತ ನಿರ್ವಹಣೆ ಕೊರತೆಯೇ ಸಮಸ್ಯೆಗೆ ಕಾರಣ ಎಂಬ ಆರೋಪ ಕೇಳಿಬಂದಿದೆ.

ಸಮಸ್ಯೆಗಳು ಹಲವಾರು!

ಈ ನಿಲ್ದಾಣದಲ್ಲಿ ಜನಜಂಗುಳಿ ಸಮಯದಲ್ಲಿ ಪರ್ಸ್, ಮೊಬೈಲ್, ಜೇಬುಗಳವು, ಸರಗಳವು ಸಾಮಾನ್ಯ ಎನಿಸಿವೆ. ನಿಲ್ದಾಣದಲ್ಲಿ ಕಳ್ಳರ ಕಾಟ ಮೀತಿ ಮೀರಿದೆ. ಸಮರ್ಪಕವಾಗಿ ಸಿಸಿ ಟಿವಿ ಕ್ಯಾಮರಾ ಅಳವಡಿಸದಿರುವುದು, ಕಳ್ಳಕಾಕರಿಗೆ ದಾರಿ ಮಾಡಿಕೊಟ್ಟಂತಾಗಿದೆ. ಭದ್ರತಾಲೋಪ ನಿಲ್ದಾಣವನ್ನು ಕಾಡುತ್ತಿದೆ. ಇದರೊಂದಿಗೆ ನಿಲ್ದಾಣದ ಒಳಗೆ ಖಾಸಗಿ ವಾಹನಗಳ ನಿಲುಗಡೆಯೂ ಸಮಸ್ಯೆಯಾಗಿದೆ. ನಿಲ್ದಾಣದ ಪ್ರವೇಶ ಹಾಗೂ ನಿರ್ಗಮನ ಸ್ಥಳದಲ್ಲಿ ಬೇಕಾಬಿಟ್ಟಿಯಾಗಿ ಪಾರ್ಕಿಂಗ್ ಮಾಡುತ್ತಿರುವ ಹಿನ್ನೆಲೆಯಲ್ಲಿ ಒಳಗೆ ಬರುವ ಹಾಗೂ ಹೊರ ಹೋಗುವ ಬಸ್‌ಗಳು ಇನ್ನಿಲ್ಲದ ಕಸರತ್ತು ನಡೆಸಬೇಕಿದೆ. ಶೌಚಗೃಹದ ನೀರು ನಿಲ್ದಾಣದ ಆವರಣದಲ್ಲಿ ಹರಿಯುವ ಕಾರಣ ಪ್ರಯಾಣಿಕರಿಗೆ ಸಾಕಷ್ಟು ಕಿರಿಕಿರಿ ಉಂಟಾಗುತ್ತಿದೆ.

ಮಳೆ ಬಂದರೆ ಕೆರೆ

ಮಳೆ ಬಂದಾಗಲಂತೂ ಈ ನಿಲ್ದಾಣ ಅವ್ಯವಸ್ಥೆಯ ಆಗರ ಎನ್ನಬಹುದು. ನಿಲ್ದಾಣದ ಆವರಣದಲ್ಲಿ ಮಳೆ ನೀರು ನಿಲ್ಲುವ ಕಾರಣ ಪ್ರಯಾಣಿಕರಿಗೆ ಸಾಕಷ್ಟು ಕಿರಿಕಿರಿಯಾಗುತ್ತಿದೆ. ಮಳೆಬಂದಾಗ ನೀರು ನಿಲ್ದಾಣದ ಆಸನಗಳ ಬಳಿ ನಿಲ್ಲುತ್ತದೆ. ಜತೆಗೆ ನಾಯಿಗಳು ಗುಂಪು ಗುಂಪಾಗಿ ನಿಲ್ದಾಣವನ್ನು ಆಕ್ರಮಿಸಿಕೊಳ್ಳುತ್ತಿವೆ. ಇದು ಸಾರ್ವಜನಿಕರಲ್ಲಿ ಆತಂಕ ಉಂಟು ಮಾಡುವಂತಿದೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಅಧಿಕಾರಿ ವರ್ಗ ಕೇವಲ ಬಾಡಿಗೆ ಪಡೆಯುವುದಕ್ಕೆ ಮಾತ್ರ ಸಿಮೀತವಾಗಿದೆ ಎಂಬ ಅನುಮಾನ ಮೂಡಿಸಿದೆ.

ಪಾರ್ಕಿಂಗ್ ದಂಧೆ ಕೇಳೋರ‌್ಯಾರು?

ನಿಲ್ದಾಣದ ಮುಂಭಾಗದ ಎರಡು ಬದಿಯಲ್ಲಿ ಬೈಕ್ ಹಾಗೂ ಕಾರುಗಳ ಪಾರ್ಕಿಂಗ್‌ಗೆ ಅವಕಾಶ ನೀಡಲಾಗಿದೆ. ಈ ಪಾರ್ಕಿಂಗ್‌ಅನ್ನು ಖಾಸಗಿಯವರು ಟೆಂಡರ್ ಪಡೆದುಕೊಂಡಿದ್ದಾರೆ. ಆದರೆ, ಸರ್ಕಾರ ಹಾಗೂ ಇಲಾಖೆ ನಿಗದಿಪಡಿಸಿರುವ ಬೆಲೆಗಿಂತ ಹೆಚ್ಚು ಹಣ ವಸೂಲಿ ಮಾಡುತ್ತಿರುವ ಆರೋಪವಿದೆ. ಗಂಟೆಗೆ,12 ಗಂಟೆಗೆ ಹಾಗೂ ದಿನದ 24 ಗಂಟೆಗೆ ಇಂತಿಷ್ಟು ಎಂದು ದರ ನಿಗದಿಪಡಿಸಲಾಗಿದೆ. ಆದರೆ, ಪರವಾನಗಿ ಪಡೆದಿರುವವರು ಬೇಕಾಬಿಟ್ಟಿಯಾಗಿ ಸಾರ್ವಜನಿಕರಿಂದ ಹಣ ಪೀಕುತ್ತಿದ್ದಾರೆ. ಸಾಮಾನ್ಯವಾಗಿ ಪಾರ್ಕಿಂಗ್ ದರಪಟ್ಟಿಯನ್ನು ಸಾರ್ವಜನಿಕವಾಗಿ ಪ್ರದರ್ಶನ ಮಾಡಬೇಕು. ಈ ವಿಚಾರ ತಿಳಿದಿದ್ದರೂ ಸಹ ಸಂಬಂಧಿಸಿದ ಅಧಿಕಾರಿಗಳು ಜಾಣ ಕುರುಡುತನ ಅನುಸರಿಸುತ್ತಿದ್ದಾರೆ.

ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಸುಸಜ್ಜಿತವಾಗಿ ನಿರ್ಮಾಣವಾಗಿರುವ ಚನ್ನಪಟ್ಟಣ ಬಸ್ ನಿಲ್ದಾಣ ಹೈಟೆಕ್ ಹೆಗ್ಗಳಿಕೆ ಪಡೆದಿದ್ದರೂ ನಿರ್ವಹಣೆ ಕೊರತೆ ಕಾಡುತ್ತಿದೆ. ನಿತ್ಯ ಹಲವು ಮಾರ್ಗಗಳಿಗೆ ನೂರಾರು ಬಸ್‌ಗಳು ಸಂಪರ್ಕಿಸುವ ಈ ನಿಲ್ದಾಣದಲ್ಲಿ ಯಾವುದೇ ಸಮಸ್ಯೆಗಳು ಎದುರಾದರೂ ಬಗೆಹರಿಸಬೇಕಾದ್ದು ಅಧಿಕಾರಿಗಳ ಹೊಣೆ. ಆದರೆ, ಸಾರಿಗೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನದಿಂದ ಸದ್ಯ ನಿಲ್ದಾಣ ಅವ್ಯವಸ್ಥೆಯ ಅಗರವಾಗಿದೆ. ಪಾರ್ಕಿಂಗ್‌ನಲ್ಲಿ ಮನಸೋ ಇಚ್ಛೆ ಸುಂಕ ವಸೂಲಿ ಮಾಡಲಾಗುತ್ತಿದೆ.ಡಿ.ನಾಗೇಶ್, ಸಾರ್ವಜನಿಕ.ಪಾರ್ಕಿಂಗ್ ದರವನ್ನು ಹೆಚ್ಚಾಗಿ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪದ ಬಗ್ಗೆ ಗಮನಹರಿಸಲಾಗುವುದು. ದರಪಟ್ಟಿ ಪ್ರದರ್ಶನಕ್ಕೆ ಕ್ರಮ ಕೈಗೊಳ್ಳಲಾಗುವುದು. ಇನ್ನುಳಿದಂತೆ ಇತರ ಸಮಸ್ಯೆಗಳ ಬಗ್ಗೆಯೂ ಶೀಘ್ರ ಗಮನಹರಿಸುತ್ತೇವೆ.ಶ್ರೀಕಾಂತ್ಘಟಕ ವ್ಯವಸ್ಥಾಪಕ, ಚನ್ನಪಟ್ಟಣ