ನೆಲಮಂಗಲ : ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುತ್ತಿರುವುದನ್ನು ಖಂಡಿಸಿ ಶಾಸಕ ಎನ್.ಶ್ರೀನಿವಾಸ್ ನೇತೃತ್ವದಲ್ಲಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದ ಬಳಿ ಧರ್ಮಸ್ಥಳ ಚಲೋಗೆ ಚಾಲನೆ ನೀಡಲಾಯಿತು.
400ಕ್ಕೂ ಅಧಿಕ ಕಾರುಗಳಲ್ಲಿ ಸಮಾವೇಶಗೊಂಡ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ರ್ಯಾಲಿಗೆ ಕ್ಷೇತ್ರದ ವಿವಿಧ ಮಠಾಧೀಶರು ಚಾಲನೆ ನೀಡಿದರು.
ಬಂಡೇಮಠದ ಶ್ರೀ ಮಹಾಲಿಂಗಸ್ವಾಮೀಜಿ ಮಾತನಾಡಿ, ಧರ್ಮದ ಉಳಿವಿಗಾಗಿ ಮಠಗಳು, ಸ್ವಾಮೀಜಿಗಳು ಶ್ರಮಿಸುತ್ತಿದ್ದು, ಮಠ, ಮಂದಿರ, ಆಚಾರ ವಿಚಾರಗಳನ್ನು ಉಳಿಸಬೇಕಿದೆ. ಶ್ರೀಕ್ಷೇತ್ರ ಧರ್ಮಸ್ಥಳ ಉನ್ನತ ಸ್ಥಾನದಲ್ಲಿದೆ. ಕ್ಷೇತ್ರದ ಬಗ್ಗೆ ಯಾವುದೇ ಅಪಪ್ರಚಾರ ನಡೆದರೂ ಧರ್ಮಾಧಿಕಾರಿಗಳು ಅತ್ಯಂತ ಸೌಮ್ಯ ಸ್ವಭಾವದಿಂದ ನಡೆದುಕೊಳ್ಳುತ್ತಿದ್ದಾರೆ. ಇದು ಬಹುತೇಕ ಮಂದಿಗೆ ಮಾದರಿ. ಧರ್ಮಾಧಿಕಾರಿಗಳಿಗೆ ಮತ್ತಷ್ಟು ಧೈರ್ಯ ತುಂಬುವ ನಿಟ್ಟಿನಲ್ಲಿ ಶಾಸಕರ ನೇತೃತ್ವದಲ್ಲಿ ರ್ಯಾಲಿ ಹಮ್ಮಿಕೊಂಡಿರುವುದು ಸಂತಸದ ಸಂಗತಿ ಎಂದರು.
ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾಧ್ಯಕ್ಷ ಸಿ.ಆರ್.ಗೌಡ ಮಾತನಾಡಿ, ಧರ್ಮಸ್ಥಳ ಒಂದು ಅತ್ಯಂತ ಪುಣ್ಯಕ್ಷೇತ್ರದ ವಾಗಿದ್ದು ಕೋಟ್ಯಂತರ ಭಕ್ತರಿದ್ದಾರೆ. ಅಂತಹ ಕ್ಷೇತ್ರದ ಕುರಿತು ಕೆಲವರು ಅಪಪ್ರಚಾರ ಮಾಡುತ್ತಿರುವುದು ಖಂಡನೀಯ. 400ಕ್ಕೂ ಹೆಚ್ಚು ಕಾರುಗಳಲ್ಲಿ ಸಾವಿರಾರು ಭಕ್ತರು ಧರ್ಮಸ್ಥಳಕ್ಕೆ ತೆರಳುತ್ತಿದ್ದಾರೆ. ಶಾಸಕರು ಎಲ್ಲರಿಗೂ ಊಟ, ವಸತಿ ಸೌಲಭ್ಯ ಕಲ್ಪಿಸಿದ್ದಾರೆ ಎಂದರು.
ಧರ್ಮಸ್ಥಳ ಚಲೋ ಶೀರ್ಷಿಕೆಯಡಿ ಆರಂಭವಾದ ಧರ್ಮರಕ್ಷಣಾ ರ್ಯಾಲಿಗೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮಾತ್ರವಲ್ಲದೇ ಕ್ಷೇತ್ರದ ಸಾರ್ವಜನಿಕರಿಂದಲೂ ಭಾರಿ ಸ್ಪಂದನೆ ದೊರೆತಿದ್ದು, ಸ್ವಯಂ ಪ್ರೇರಿತರಾಗಿ ಕುಟುಂಬ ಸಮೇತ ರ್ಯಾಲಿಯಲ್ಲಿ ಧರ್ಮಸ್ಥಳಕ್ಕೆ ತೆರಳಿದ್ದು ಕಂಡು ಬಂತು.
ಬಂಡೇಮಠ ಶ್ರೀ ಮಹಾಲಿಂಗಸ್ವಾಮೀಜಿ, ಜಗಣ್ಣಯ್ಯ ಮಠದ ಶ್ರೀ ಚನ್ನಬಸವ ಸ್ವಾಮೀಜಿ, ಕಂಬಾಳ ಮಠದ ಶ್ರೀ ಚನ್ನವಿರ ಸ್ವಾಮೀಜಿ, ತ್ಯಾಮಗೊಂಡ್ಲು ಮಠದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.
ನೆ.ಯೋ.ಪ್ರಾಧಿಕಾರ ಅಧ್ಯಕ್ಷ ಎಂ.ನಾರಾಯಣ್ಗೌಡ, ಸದಸ್ಯ ಬಿ.ಜಿ.ವಾಸು, ಪ್ರಕಾಶ್ಬಾಬು, ರಂಗಸ್ವಾಮಿ, ನಗರಸಭೆ ಅದ್ಯಕ್ಷ ಎನ್.ಗಣೇಶ್, ಉಪಾಧ್ಯಕ್ಷ ಆನಂದ್, ಸ್ಥಾಯಿ ಸಮಿತಿ ಅದ್ಯಕ್ಷ ಪದ್ಮನಾಭಪ್ರಸಾದ್, ಸದಸ್ಯ ಸಿ.ಪ್ರದಿಪ್, ನರಸಿಂಹಮೂರ್ತಿ, ಪುರುಷೋತ್ತಮ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ್, ರಂಗಸ್ವಾಮಿ, ನಗರಸಭೆ ನಾಮನಿರ್ದೇಶಿತ ಮಾಜಿ ಸದಸ್ಯ ಕೆ.ವಸಂತ್, ಮುಖಂಡ ಎಂ.ಕೆ.ನಾಗರಾಜು, ಅಗಳಕುಪ್ಪೆ ಗೋವಿಂದರಾಜು, ಪೈಂಟ್ ಮಂಜುನಾಥ್, ಸಿ.ಎಂ.ಗೌಡ, ನಾರಾಯಣ್ಗೌಡ, ಮನುಗೌಡ, ಪ್ರದಿಪ್ಕುಮಾರ್, ಲೋಕೇಶ್, ನಾರಾಯಣ್ರಾವ್, ರವಿಕುಮಾರ್, ಮೂರ್ತಿ, ಮುನಿರಾಜು ಇತರರು ಇದ್ದರು.
ಮಂಜುನಾಥ ಸ್ವಾಮಿಗೆ ಪೂಜೆ : ಧರ್ಮಸ್ಥಳ ಚಲೋ ಹೆಸರಿನ ಕಾರು ರ್ಯಾಲಿಗೂ ಮುನ್ನ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸಾನ್ನಿಧ್ಯ ವಹಿಸಿದ್ದ ಮಠಾಧೀಶರು ಮಂಜುನಾಥ ಸ್ವಾಮಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಶಾಸಕರು ಮತ್ತವರ ಬೆಂಬಲಿಗರಿಗೆ ರ್ಯಾಲಿ ಯಶಸ್ವಿಯಾಗಲೆಂದು ಶುಭ ಕೋರಿದರು. ಕಾರ್ಯಕರ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಮಂಗಳೂರು ಮಾರ್ಗದ ಹಿರಿಸಾವೆ ಬಳಿಯ ಸಮುದಾಯ ಭವನದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ನಂತರ ಪ್ರತಿ ಕಾರಿಗೆ ಸಿಹಿ ಹಾಗೂ ಕಾರದ ತಿನಿಸು ವಿತರಣೆ ಮಾಡಲಾಯಿತು.
ಸರ್ಕಾರದಿಂದ ಕ್ಷೇತ್ರದ ಹೆಸರು ಉಳಿಸುವ ಕೆಲಸ: ಶಾಸಕ ಎನ್.ಶ್ರೀನಿವಾಸ್ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ನಾಡಿನ ಜನರು ವಿಶೇಷ ಗೌರವ ಇಟ್ಟುಕೊಂಡಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಧರ್ಮಸ್ಥಳ ಕ್ಷೇತ್ರ ಹಾಗೂ ಧರ್ಮಾಧಿಕಾರಿ ಅವರ ವಿರುದ್ಧ ಅಪಪ್ರಚಾರ ಮಾಡಿ ಪವಿತ್ರ ಕ್ಷೇತ್ರಕ್ಕೆ ಮಸಿ ಬಳಿಯುವ ವ್ಯವಸ್ಥಿತ ಹುನ್ನಾರ ನಡೆಯುತ್ತಿದ್ದು, ಇದನ್ನು ಖಂಡಿಸಿ ವಿವಿಧ ಮಠಾಧೀಶರ ಮಾರ್ಗದರ್ಶನದಲ್ಲಿ ರ್ಯಾಲಿ ಆಯೋಜಿಸಲಾಗಿದೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಸಹಕಾರ ನೀಡಿದ್ದಾರೆ. ರಾಜ್ಯ ಸರ್ಕಾರ ಧರ್ಮಸ್ಥಳದ ಪರವಾಗಿದ್ದು ೇತ್ರದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದವರಿಗೆ ತಕ್ಕ ಉತ್ತರ ನೀಡಲಿದೆ. ಎಸ್ಐಟಿ ಮೂಲಕ ಸತ್ಯ ಹೊರ ತೆಗೆದು ಕ್ಷೇತ್ರ ಹೆಸರನ್ನು ಉಳಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದರು.
ತರಕಾರಿ, ದವಸ ಧಾನ್ಯ ದಾನ : ರ್ಯಾಲಿ ಹಿನ್ನೆಲೆಯಲ್ಲಿ ದಾನಿ ಮಣ್ಣೆ ಗ್ರಾಮ ಪಂಚಾಯಿತಿ ಸದಸ್ಯ ಪೈಂಟ್ ಮಂಜುನಾಥ್ ಒಂದು ಕ್ಯಾಂಟರ್ ಲಾರಿಯಲ್ಲಿ ಅಕ್ಕಿ, ಬೆಲ್ಲ, ರವೆ, ಎಣ್ಣೆ ಸೇರಿ ದವಸ ಧಾನ್ಯಗಳು ಹಾಗೂ ಮತ್ತೊಂದು ಕ್ಯಾಂಟರ್ ಲಾರಿಯಲ್ಲಿ ತರಕಾರಿ ಧರ್ಮಸ್ಥಳಕ್ಕೆ ಕಳುಹಿಸಿಕೊಟ್ಟರು.