ಜಿಲ್ಲೆ

ಬಿರ್ಸಾಮುಂಡ ಆದಿವಾಸಿಗಳ ಅಸ್ಮಿತೆ

ರವಿಕುಮಾರ್ ಪಿ. ಕೆ

ಹುಣಸೂರು: ಭಗವಾನ್ ಬಿರ್ಸಾಮುಂಡ ಆದಿವಾಸಿ ಸಮುದಾಯಗಳ ಅಸ್ಮಿತೆಯಾಗಿದ್ದಾರೆ ಎಂದು ಡೀಡ್ ಸಂಸ್ಥೆ ನಿರ್ದೇಶಕ ಡಾ.ಎಸ್.ಶ್ರೀಕಾಂತ್ ಅಭಿಪ್ರಾಯಪಟ್ಟರು.

ಬಿರ್ಸಾ ಮುಂಡ ಅವರ 149ನೇ ಜಯಂತಿ ಅಂಗವಾಗಿ ಗುರುವಾರ ನಗರದ ಡೀಡ್ ಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ಆದಿವಾಸಿ-ಜನಜಾತಿ ಗೌರವ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿ, ಬ್ರಿಟಿಷರ ವಿರುದ್ಧದ ಬಿರ್ಸಾಮುಂಡ ಹೋರಾಟ ಅವಿಸ್ಮರಣೀಯ ಎಂದರು.

ಅಸ್ಸಾದಿ ವರದಿ ಶಿಫಾರಸಿನಂತೆ 3418 ಕುಟುಂಬಕ್ಕೆ ಪುನರ್ವಸತಿ ಕಲ್ಪಿಸುವಂತೆ 2009ರಲ್ಲಿ ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದ್ದು, ಈವರೆಗೂ ಪುನರ್ವಸತಿಗೆ ಕ್ರಮವಹಿಸಿಲ್ಲ. ಇಂದಿನ ಸರ್ಕಾರಗಳು ನ್ಯಾಯಾಲಯದ ಸೂಚನೆಗೂ ಗೌರವ ನೀಡದಿರುವುದು ವಿಷಾದಕರ ಸಂಗತಿ. ಇನ್ನಾದರೂ ಸರ್ಕಾರ ಕೂಡಲೇ ಹೈಕೋರ್ಟ್ ಆದೇಶವನ್ನು ಗೌರವಿಸಬೇಕು ಎಂದು ಆಗ್ರಹಿಸಿದರು.

ಅಧ್ಯಕ್ಷತೆ ವಹಿಸಿದ್ದ ದಲಿತ ಚಳವಳಿ ನವನಿರ್ಮಾಣ ವೇದಿಕೆ ಮುಖ್ಯಸ್ಥ ಹರಿಹರ ಆನಂದಸ್ವಾಮಿ ಮಾತನಾಡಿ, ಸ್ವಾತಂತ್ರ್ಯ ಹೋರಾಟ ಆದಿವಾಸಿ ಅರಣ್ಯ ಪ್ರದೇಶಗಳಿಂದ ಪ್ರಾರಂಭವಾಗಿ ರಾಷ್ಟ್ರೀಯ ಚಳವಳಿಯಾಗಿ ಬೆಳೆದು ಸ್ವಾತಂತ್ರ್ಯ ಸಂಗ್ರಾಮವಾಯಿತು ಎಂದು ಅಭಿಪ್ರಾಯಪಟ್ಟರು. ಆದಿವಾಸಿ ಮುಖಂಡರಾದ ಜಯಪ್ಪ ಕೊಳವಿಗೆ ಹಾಡಿ, ಲಕ್ಷ್ಮೀ ಭರತವಾಡಿ, ಜೆ.ಡಿ.ಜಯಪ್ಪ ರಾಣಿಗೇಟ್, ಗೌರಮ್ಮ ಲಿಂಗಾಪುರ, ದೇವಮ್ಮ ಮಾರನಹಾಡಿ, ವಸಂತಮ್ಮ ಸರಗೂರು ಹಾಗೂ ನವ ನಿರ್ಮಾಣ ವೇದಿಕೆಯ ಹರಿಹರ ಆನಂದಸ್ವಾಮಿ ಅವರನ್ನು ಸನ್ಮಾನಿಸಲಾಯಿತು.

ವೇದಿಕೆ ಕಾರ್ಯಕ್ರಮದ ನಂತರ ಬಿರ್ಸಾಮುಂಡ ಭವನದಿಂದ ಸಂವಿಧಾನ ವೃತ್ತದವರೆಗೆ ಕಾಲ್ನಡಿಗೆ ಜಾಥಾ ನಡೆಯಿತು. ಪಿ.ಕೆ.ರಾಮು, ದೇವಮ್ಮ, ಬಸಪ್ಪ, ಜಯಪ್ಪ, ವಿಠಲ್, ಜೆ.ಡಿ. ಜಯಪ್ಪ, ಎ.ಪ್ರಕಾಶ್ ದೇವರಾಜು ಅರಸು ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಪ್ರತಿಭಾ ಇತರರಿದ್ದರು.