ಹುಣಸೂರು : ವಿದ್ಯಾರ್ಥಿಗಳ ಸಂಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆ ಎಂದು ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಜೀವಶಾಸ್ತ್ರ ವಿಭಾಗದ ಉಪನ್ಯಾಸಕ ಎಚ್.ಎನ್.ಗಿರೀಶ್ ಅಭಿಪ್ರಾಯಪಟ್ಟರು. ನಗರದ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಹುಣಸೂರು ನಗರ ದಕ್ಷಿಣ ಕ್ಲಸ್ಟರ್ ವಿಬಾಗದ 2024-25ನೇ ಸಾಲಿನ ಪ್ರತಿಭಾ ಕಾರಂಜಿ ಕಾರ್ಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರತಿಭಾ ಕಾರಂಜಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳು ಶೈಕ್ಷಣಿಕ ಮತ್ತು ಶೈಕ್ಷಣಿಕೇತರ ವಿಭಾಗಗಳೆರಡಲ್ಲೂ ಮುಂಚೂಣಿಯಲ್ಲಿರುತ್ತಾರೆ . ರಾಜ್ಯ ಸಾಕ್ಷರತಾ ಇಲಾಖೆ ನಡೆಸಿರುವ ಸಮೀಕ್ಷೆಯಲ್ಲಿ ಇದು ದೃಢವಾಗಿದೆ ಎಂದರು. ಕ್ರೀಡೆಯಲ್ಲಿ ಸಾಧನೆ ತೋರುವ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಹಿಂದೆ ಬೀಳಬಾರದು.
ಪಠ್ಯೇತರ ಚಟುವಟಿಕೆಗಳು ಅಧ್ಯಯನಕ್ಕೆ ಸದಾ ಪೂರಕವಾಗಿಯೇ ಇರಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವಿಕೆಯೇ ಮುಖ್ಯ. ಸೋಲು- ಗೆಲುವು ಅಲ್ಲ ಎನ್ನುವುದನ್ನು ಪುಟಾಣಿಗಳಿಗೆ ಶಿಕ್ಷಕರು ಮತ್ತು ಪಾಲಕರು ಮನದಟ್ಟು ಮಾಡಬೇಕೆಂದು ಅವರು ಹೇಳಿದರು.
ಮುಖ್ಯಶಿಕ್ಷಕ ಸಿ.ಎಸ್.ಮಹೇಶ್ ಮಾತನಾಡಿ, ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯ ಆಯೋಜನೆ ನಮ್ಮೆಲ್ಲರ ಹೆಮ್ಮೆ. ದಕ್ಷಿಣ ಕ್ಲಸ್ಟರ್‌ನ ವ್ಯಾಪ್ತಿಯ 16 ಶಾಲೆಗಳ 350ಕ್ಕೂ ಹೆಚ್ಚು ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಕ್ಕೆ ಇದು ವೇದಿಕೆಯಾಗಿರುವುದು ಶ್ಲಾಘನೀಯ ಎಂದರು.
ಎಸ್‌ಡಿಎಂಸಿ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷ ರಾಜು, ಕ್ಷೇತ್ರ ಸಮನ್ವಯಾಧಿಕಾರಿ ಹೇಮಲತಾ, ಇಸಿಒ ಕುಮಾರಸ್ವಾಮಿ ಮತ್ತು ಕೇಶವಮೂರ್ತಿ, ಸಿಆರ್‌ಪಿ ಸ್ಮಿತಾ ಶಿಂಧೆ, ಬಿಐಇಆರ್‌ಟಿಗಳಾದ ಸೋಮಶೇಖರ್, ದಿವಾಕರ್, ಸಿಆರ್‌ಪಿ ಪ್ರಶಾಂತ್ ಇದ್ದರು.