ಜಮಖಂಡಿಯ ಬಸವಜ್ಯೋತಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ತಾಪಂ ಇಒ ಸಂಜೀವ ಜುನ್ನೂರ ಅವರನ್ನು ಸನ್ಮಾನಿಸಲಾಯಿತು. ಡಾ.ಗಿರೀಶ ಕಡ್ಡಿ, ಡಾ.ಟಿ.ಪಿ. ಗಿರಡ್ಡಿ, ಪ್ರೊ.ಬಸವರಾಜ ಕಡ್ಡಿ, ಪಿ.ಐ. ಹೊಸಮಠ ಮತ್ತಿತರರಿದ್ದಾರೆ. 
ಜಿಲ್ಲೆ

ಸಾಧನೆ ಹಾದಿಯಲ್ಲಿ ಅವಮಾನ ಸಾಮಾನ್ಯ

ವಿನಯ ಆಶೋಕ ನಾಯ್ಕ

ಜಮಖಂಡಿ: ಗಟ್ಟಿ ಮನಸ್ಸು ಮಾಡಿ ಕಾರ್ಯ ಪ್ರವೃತ್ತರಾದರೆ ಸಾಧನೆ ಕಟ್ಟಿಟ್ಟ ಬುತ್ತಿ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಂಜೀವ ಜುನ್ನೂರ ಹೇಳಿದರು.

ಬಸವಜ್ಯೋತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಹಾಗೂ ಬಸವಜ್ಯೋತಿ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.

ಸಾಧನೆಯ ಹಾದಿಯಲ್ಲಿ ಸಾಗುವವರಿಗೆ ಅವಮಾನಿಸುವವರು ಇರುತ್ತಾರೆ. ಆದರೆ, ಸಾಧಿಸಿ ತೋರಿಸಲಿ ಎಂದು ಪ್ರೇರೇಪಿಸಲು ಅವಮಾನಿಸಿದ್ದಾರೆ ಎಂಬ ಸಕಾರಾತ್ಮಕ ಮನೋಭಾವನೆ ಇಟ್ಟುಕೊಂಡರೆ ಸಾಧನೆ ಮಾಡಿ. ಮುಂದೊಂದು ದಿನ ಸನ್ಮಾನಿಸುವವರು ಇರುತ್ತಾರೆ ಎಂದರು.

ಪ್ರಾಚಾರ್ಯ ಡಾ. ಟಿ.ಪಿ. ಗಿರಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಾಲಕರಿಗೆ ಹೊರೆಯಾಗದೆ ಅವರಿಗೆ ಆಸರೆಯಾಗುವ ರೀತಿಯಲ್ಲಿ ಸಾಧಕರ ಪ್ರೇರಣೆ ಪಡೆದು ಜೀವನ ರೂಪಿಸಿಕೊಳ್ಳಬೇಕು ಎಂದರು.

ಪ್ರೊ. ಬಸವರಾಜ ಕಡ್ಡಿ ಮಾತನಾಡಿದರು. ವಿದ್ಯಾರ್ಥಿಗಳಾದ ಅಕ್ಷರಾ ತೇಲಿ, ಸಚಿನ ಕಕಮರಿ, ಸುಮಾ ಮಠಪತಿ, ಶೋಭಾ ಶಿರಬೂರ, ವಿನಾಯಕ ಹುಲ್ಯಾಳ ಹಾಗೂ ಶಿಕ್ಷಕಿ ಸುನಿತಾ ಕುಮಕಾಳೆ ಅನಿಸಿಕೆ ಹಂಚಿಕೊಂಡರು. ಮುಖ್ಯಶಿಕ್ಷಕ ಪಿ.ಐ. ಹೊಸಮಠ ಮತ್ತಿತರರಿದ್ದರು.

ಸಾಕ್ಷಿ ಸಂಕ್ರಾವತ, ದೀಪಾ ಹಾವನಾಳ ಪ್ರಾರ್ಥಿಸಿದರು, ಸಂಸ್ಥೆಯ ಅಧ್ಯಕ್ಷ ಡಾ.ಗಿರೀಶ ಕಡ್ಡಿ ಸ್ವಾಗತಿಸಿದರು. ಉಪನ್ಯಾಸಕ ಪಿ.ಎನ್. ವಜ್ಜರಮಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಡಾ.ಎಂ.ಎನ್. ಕುಂಬಾರ ಅತಿಥಿಗಳನ್ನು ಪರಿಚಯಿಸಿದರು. ಕಾವೇರಿ ಗುಗ್ಗರಿ, ಪೂರ್ವಾ ಭೋಸಲೆ, ಪದ್ಮಶ್ರೀ ನ್ಯಾಮಗೌಡ ನಿರೂಪಿಸಿದರು. ಶಿಕ್ಷಕಿ ಆಸ್ಮಾ ಪಠಾಣ ವಂದಿಸಿದರು.