ಹುಮನಾಬಾದ್: ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಹಾಗೂ ಭಕ್ತರಿಂದ ಸ್ಥಳೀಯ ಹಿರೇಮಠದ ಪೀಠಾಧಿಪತಿ ಶ್ರೀ ವೀರ ರೇಣುಕ ಗಂಗಾಧರ ಶಿವಾಚಾರ್ಯರ ೩೪ನೇ ಜನ್ಮದಿನವನ್ನು ಗುರುವಾರ ವಿಶಿಷ್ಟವಾಗಿ ಆಚರಿಸಲಾಯಿತು.
ಸಂಜೆ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೀರಣ್ಣ ಪಾಟೀಲ್ ಮತ್ತು ನಿರ್ದೇಶಕರು ಶ್ರೀಗಳಿಗೆ ಭಕ್ತರ ಸಮ್ಮುಖದಲ್ಲಿ ಚಿನ್ನದ ಉಂಗುರ ತೊಡಿಸಿ ಜನ್ಮದಿನದ ಶುಭಕೋರಿ ಆರ್ಶೀವಾದ ಪಡೆದುಕೊಂಡರು. ಪಟ್ಟಣ ಸೇರಿ ವಿವಿಧಡೆಯಿಂದ ಆಗಮಿಸಿದ ಭಕ್ತರು ಸಹ ಶ್ರೀಗಳನ್ನು ಗೌರವಿಸಿದರು.
ಸನ್ಮಾನ ಸ್ವೀಕರಿಸಿದ ಶ್ರೀ ವೀರ ರೇಣುಕ ಗಂಗಾಧರ ಶಿವಾಚಾರ್ಯ ಆಶೀರ್ವಚನ ನೀಡಿ, ಆರಾಧ್ಯದೈವ ಶ್ರೀ ವೀರಭದ್ರೇಶ್ವರರ ಕೃಪಾಶೀರ್ವಾದ ಎಲ್ಲರ ಮೇಲೂ ಇದೆ. ಇಲ್ಲಿನ ಹಿರೇಮಠದ ಪೀಠ ಅಲಕಂರಿಸಿ ೧೨ ವರ್ಷ ಕಳೆದಿದ್ದು, ಪಟ್ಟಾಧಿಕಾರದ ನಂತರ ನಿರಂತರ ಶ್ರೀ ವೀರಭದ್ರ ದೇವರ ಸೇವೆಯೊಂದಿಗೆ ಮಠದ ಅಭಿವೃದ್ಧಿ ಮೂಲಕ ಭಕ್ತರಲ್ಲಿ ಧರ್ಮಜಾಗೃತಿ ಮೂಡಿಸಲಾಗುತ್ತಿದೆ ಎಂದು ನುಡಿದರು.
ಭಕ್ತರು ದಿನನಿತ್ಯ ಪುರಾಣ ಪ್ರವಚನ ಆಲಿಸಿ ಸ್ವಚ್ಛ ಮನಸ್ಸಿನಿಂದ ವೀರಭದ್ರೇಶ್ವರ ದೇವಸ್ಥಾನದಲ್ಲಿ ದರ್ಶನ ಪಡೆದ ಬಳಿಕ ದೈನಂದಿನ ಕಾಯಕದಲ್ಲಿ ತೊಡಗಿಸಿಕೊಳ್ಳಿ. ನಿಮಗೆ ವೀರಭದ್ರೇಶ್ವರ ದೇವರು ಸುಖ ಶಾಂತಿ ಸಮೃದ್ಧಿ ಕರುಣಿಸಲಿದ್ದಾರೆ. ಮುಖ್ಯ ಆಧುನಿಕತೆ ಭರಾಟೆಯಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ಇಂದು ಪ್ರತಿಯೊಬ್ಬರೂ ತಮ್ಮ ಮಕ್ಕಳಲ್ಲಿ ಧರ್ಮಜಾಗೃತಿ ಜತೆಗೆ ಮಾನವೀಯ ಮೌಲ್ಯ ಮೂಡಿಸಿದರೆ ಅದೇ ನನಗೆ ನೀಡುವ ಶುಭ ಹಾರೈಕೆ ಎಂದರು.
ಸಮಿತಿ ನಿರ್ದೇಶಕರಾದ ಮಹೇಶ ಅಗಡಿ, ದತ್ತಕುಮಾರ ಚಿದ್ರಿ, ಗುರು ಪೂಜಾರಿ, ಕಲಾವತಿ ರಜಪೂತ, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಬಾಬುರಾವ ಪೋಚಂಪಳ್ಳಿ, ಬ್ರಾಹ್ಮಣ ಸಮಾಜ ಮುಖಂಡ ವೆಂಕಟರಾವ ಕುಲಕರ್ಣಿ, ಪ್ರಮುಖರಾದ ಲಕ್ಷ್ಮೀಕಾಂತ ಹಿಂದೊಡ್ಡಿ, ಬಾಬುರಾವ ಪರಮಶೆಟ್ಟಿ, ರಾಜು ಶೀಲವಂತ, ಶರಣಪ್ಪ ಬುಡ್ಡಾ, ನಾಗಭೂಷಣ ವಿಭೂತಿ ಇತರರಿದ್ದರು.
ಪರಂಪರೆಯಂತೆ ದೇವಸ್ಥಾನದ ಪ್ರತಿಯೊಂದು ಕಾರ್ಯ ಶ್ರೀಗಳ ಸಾನ್ನಿಧ್ಯದಲ್ಲಿ ಅಚ್ಚುಕಟ್ಟಾಗಿ ನಡೆಯುತ್ತಿವೆ. ಭಕ್ತರಿಗೆ ಧರ್ಮೋಪದೇಶ ಮಾಡುತ್ತಿರುವ ಶ್ರೀಗಳ ಮಾರ್ಗದರ್ಶನ ಹಾಗೂ ಭಕ್ತರ ಸಹಕಾರ, ಸಲಹೆಗಳೊಂದಿಗೆ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಸಮಿತಿ ಬದ್ಧವಾಗಿದೆ.
| ವೀರಣ್ಣ ಪಾಟೀಲ್ ಅಧ್ಯಕ್ಷ, ವೀರಭದ್ರೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ