ಹುಮನಾಬಾದ್‌ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಂಚೆ ಜನಸಂಪರ್ಕ ಅಭಿಯಾನದಲ್ಲಿ ಅಧೀಕ್ಷಕ ಶ್ರೀಕರಬಾಬು ಮಾತನಾಡಿದರು. ಪ್ರಾಚಾರ್ಯ ಪಿ.ಆರ್.ಹುಗ್ಗಿ, ವಿಜಯಕುಮಾರ ಪೋಳ, ಡಾ.ತುಳಜಾರಾಮ, ದೇವಿಂದ್ರಪ್ಪ ಆರ್ಯ, ಸುನೀಲ ಬಿರಾದಾರ, ಪಿಂಕಮ್ಮಾ ಇತರರಿದ್ದರು. 
ಜಿಲ್ಲೆ

ಅಂಚೆ ಯೋಜನೆ ಸದುಪಯೋಗ ಆಗಲಿ

ರಾಜು ಯಮಕನಮರಡಿ

ಹುಮನಾಬಾದ್: ಅತ್ಯಂತ ವಿಶ್ವಾಸಾರ್ಹತೆಯ ಅಂಚೆ ಇಲಾಖೆ ಪತ್ರ ವ್ಯವಹಾರದ ಜತೆಗೆ ಜೀವ ವಿಮೆ, ವಯೋನಿವೃತ್ತಿ ವೇತನ, ಬ್ಯಾಂಕಿಂಗ್, ಸುಕನ್ಯಾ ಸಮೃದ್ಧಿ ಸೇರಿ ಜಾರಿಗೊಳಿಸಿದ ನಾನಾ ಯೋಜನೆಗಳ ಸದ್ಬಳಕೆ ಮಾಡಿಕೊಳ್ಳುವಂತೆ ಬೀದರ್ ವಿಭಾಗದ ಅಂಚೆ ಅಧೀಕ್ಷಕ ಶ್ರೀಕರಬಾಬು ಕರೆ ನೀಡಿದರು.

ಪಟ್ಟಣದ ಸರ್ಕಾರಿ ಪದವಿಪೂರ್ವ ಬಾಲಕರ ಕಾಲೇಜಿನಲ್ಲಿ ಎನ್ನೆಸ್ಸೆಸ್ ಘಟಕ ಹಾಗೂ ಅಂಚೆ ಇಲಾಖೆ ಸಹಯೋಗದಡಿ ಬುಧವಾರ ಹಮ್ಮಿಕೊಂಡಿದ್ದ ಅಂಚೆ ಜನಸಂಪರ್ಕ ಅಭಿಯಾನ ಉದ್ಘಾಟಿಸಿದ ಅವರು, ಅಂಚೆ ಇಲಾಖೆ ಮೂಲಕ ನಗರ ಸೇರಿ ಗ್ರಾಮೀಣ ಜನರಿಗೆ ಸೌಲಭ್ಯ ಒದಗಿಸಲು ಪ್ರಧಾನಿ ನರೇಂದ್ರ ಮೋದಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಹೀಗಾಗಿ ಇಲಾಖೆಯಲ್ಲಿ ಸಾರ್ವಜನಿಕರಿಗೆ ಸುಲಭವಾಗಿ ಸೌಲಭ್ಯ ಸಿಗುವಂತಾಗಿದೆ. ವಿದ್ಯಾರ್ಥಿಗಳು ಇಲಾಖೆ ಯೋಜನೆಗಳ ಬಗ್ಗೆ ಅರಿತು ಜನರಿಗೆ ತಿಳಿಸುವಂಥ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪಿ.ಆರ್. ಹುಗ್ಗಿ ಮಾತನಾಡಿ, ಅಂಚೆ ಇಲಾಖೆ ಹಿಂದಿನಿಂದಲೂ ಕೇವಲ ಪತ್ರ ವ್ಯವಹಾರಕ್ಕೆ ಸೀಮಿತ ಎನ್ನುವಂತಿತ್ತು. ಆದರೀಗ ಅಂಚೆ ಸೇವೆ ಜತೆಗೆ ಬ್ಯಾಂಕ್ ವ್ಯವಹಾರ, ಜೀವವಿಮೆ ಸೇರಿ ಸರ್ಕಾರದ ಕೆಲ ಯೋಜನೆಗಳ ಸೌಲಭ್ಯ ಒದಗಿಸುತ್ತಿರುವುದು ಶ್ಲಾಘನೀಯ ಎಂದರು.

ಬೀದರ್‌ನ ಐಪಿಪಿಬಿ ಹಿರಿಯ ವ್ಯವಸ್ಥಾಪಕ ವಿಜಯಕುಮಾರ ಪೋಳ, ಎನ್ನೆಸ್ಸೆಸ್ ಅಧಿಕಾರಿ ಡಾ.ತುಳಜಾರಾಮ, ಪ್ರೌಢಶಾಲೆ ಮುಖ್ಯಗುರು ದೇವೇಂದ್ರಪ್ಪ ಮಾತನಾಡಿದರು. ಎಎಸ್‌ಐ ದೇವಿಂದ್ರಪ್ಪ ಆರ್ಯ, ಸುನೀಲ ಬಿರಾದಾರ, ಪಿಂಕಮ್ಮಾ, ರಿಯಾಜ್, ತಿಪ್ಪಣ್ಣ ಕೆಂಪೆನೋರ, ಗೋರಖನಾಥ, ಗೀತಾ ಸಜ್ಜನ್ ಇತರರಿದ್ದರು. ಉಮೇಶ ಡೋಣೆ ಸ್ವಾಗತಿಸಿದರು. ಮಹಾಂತೇಶ ಕುರ್ಲೆ ವಂದಿಸಿದರು. ಅನೀಲಕುಮಾರ ಭಾಲ್ಕೆ ನಿರೂಪಣೆ ಮಾಡಿದರು.