ಚಿಕ್ಕಮಗಳೂರು: ಮಾನವ ಮತ್ತು ವನ್ಯಜೀವಿ ಸಂಘರ್ಷದಲ್ಲಿ ಪ್ರತಿ ವರ್ಷ ರಾಜ್ಯದಲ್ಲಿ 50ರಿಂದ 55 ಮಂದಿ ಸಾವನ್ನಪ್ಪುತ್ತಿದ್ದಾರೆ. ವನ್ಯಜೀವಿಗಳಿಂದ ಪ್ರಾಣಹಾನಿ ತಪ್ಪಿಸುವ ಉದ್ದೇಶದಿಂದ ಶಾಶ್ವತ ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಭಾನುವಾರ ಅರಣ್ಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜೀವ ಅಮೂಲ್ಯ. ಹೀಗಾಗಿ ಪ್ರಾಣ ಹಾನಿ ತಪ್ಪಿಸಲು ಎಲ್ಲರೂ ಸೇರಿ ಪ್ರಯತ್ನ ಮಾಡಬೇಕಾದ ಅನಿವಾರ್ಯತೆ ಇದೆ ಎಂದರು.
ಆನೆ, ಹುಲಿ, ಚಿರತೆಗಳು ಕಾಡು ಬಿಟ್ಟು ಜನವಸತಿ ಪ್ರದೇಶಕ್ಕೆ ಏಕೆ ಬರುತ್ತಿವೆ ಎಂಬುದರ ಕಾರಣ ತಿಳಿಯಲು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ವನ್ಯಜೀವಿಗಳು ನಾಡಿಗೆ ಬರುತ್ತಿರುವ ಕಾರಣ ತಿಳಿದಲ್ಲಿ ಪರಿಹಾರ ಕಂಡುಕೊಳ್ಳುವುದು ಸುಲಭವಾಗಲಿದೆ. ಅದರಲ್ಲೂ ಪಶ್ಚಿಮಘಟ್ಟ ಪ್ರದೇಶದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ಹೆಚ್ಚಿನ ಪ್ರಮಾಣದಲ್ಲಿದೆ ಎಂದು ಮಾಹಿತಿ ನೀಡಿದರು.
ಅರಣ್ಯ ಇಲಾಖೆಗೆ ನೀಡುವ ಅನುದಾನ ಕಡಿಮೆ ಇದೆ. ಹೀಗಾಗಿ ಹೆಚ್ಚಿನ ಅನುದಾನ ನೀಡುವಂತೆ ಸಿಎಂ ಸಿದ್ದರಾಮಯ್ಯ ಬಳಿ ಮನವಿ ಮಾಡಿದ್ದೇನೆ. ಅವರು ಅಧಿಕ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಅದನ್ನು ಬಳಸಿಕೊಂಡು ವನ್ಯಜೀವಿಗಳು ನಾಡಿಗೆ ಬರದಂತೆ ತಡೆಯಲು ಪೆನ್ಸಿಂಗ್ ಹಾಗೂ ಕಾಡಿನ ಸುತ್ತಲೂ ಕಂದಕ ತೆಗೆಯಲಾಗುವುದು. ಎಲ್ಲಿ ಹೆಚ್ಚಿನ ಸಮಸ್ಯೆ ಇದೆಯೋ ಅಲ್ಲಿ ಮೊದಲ ಹಂತದಲ್ಲಿ ಕಾಮಗಾರಿ ನಡೆಸಲಾಗುವುದು ಎಂದು ವಿವರಿಸಿದರು.
ಅರಣ್ಯ ಸಚಿವನಾದ ಬಳಿಕ ಚಿಕ್ಕಮಗಳೂರು ಜಿಲ್ಲೆಗೆ ಇದು ಪ್ರಥಮ ಭೇಟಿ. ಆದರೆ ಇಲಾಖೆ ಅಧಿಕಾರಿಗಳಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಇಲ್ಲಿನ ಮಾಹಿತಿ ಪಡೆದಿದ್ದೆ. ಜತೆಗೆ ಇಲಾಖೆಗೆ ಸಂಬಂಧಪಟ್ಟಂತೆ ಆಗಬೇಕಿರುವ ಕೆಲಸಗಳ ಬಗ್ಗೆಯೂ ಅಧಿಕಾರಿಗಳಿಂದ ಮಾಹಿತಿ ಪಡೆದು ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿದ್ದೇನೆ ಎಂದು ತಿಳಿಸಿದರು.
ಶಾಸಕರಾದ ನಯನಾ ಮೋಟಮ್ಮ, ಎಚ್.ಡಿ.ತಮ್ಮಯ್ಯ, ಕೆ.ಎಸ್.ಆನಂದ್, ಟಿ.ಡಿ.ರಾಜೇಗೌಡ, ಡಿಸಿ ಮೀನಾ ನಾಗರಾಜ್, ಅರಣ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.