ಜಿಲ್ಲೆ

ಸಮಾಜದಲ್ಲಿ ಕುಸಿಯುತ್ತಿವೆ ಮಾನವೀಯ ಮೌಲ್ಯಗಳು

ಜಿ.ಹೆಚ್. ಧನ್ಯಕುಮಾರ್

ಕಡೂರು: ಭಕ್ತಿ, ಧಾರ್ಮಿಕತೆ, ವೈಚಾರಿಕತೆಯ ಮೌಲ್ಯಗಳ ಮೂಲಕ ಜನರ ಮನಸ್ಸುಗಳನ್ನು ಒಗ್ಗೂಡಿಸಿ ಸಮ ಸಮಾಜದ ನಿರ್ಮಾಣದ ಆಶಯದ ಅಭಿಯಾನವೇ ಬಸವ ಸಂಸ್ಕೃತಿ ಅಭಿಯಾನ ಎಂದು ಚಿಕ್ಕಮಗಳೂರಿನ ಬಸವತತ್ವ ಪೀಠದ ಡಾ.ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.

ಯಳನಡು ಸಂಸ್ಥಾನ ಮಠದ ಆವರಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ, ಯಳನಡು ಮಹಾಸಂಸ್ಥಾನ ಮಠ ಮತ್ತು ಬಸವಪರ ಸಂಘಟನೆಗಳ ಆಶ್ರಯದಲ್ಲಿ ನಡೆದ ಶರಣರ ಬೆಳದಿಂಗಳು ಉಪನ್ಯಾಸ ಮಾಲಿಕೆ ಮತ್ತು ಬಸವ ಸಂಸ್ಕೃತಿ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ನಾಗರಿಕ ಸೌಲಭ್ಯಗಳು ಹೆಚ್ಚಾಗಿ ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿವೆ. ವೈಚಾರಿಕತೆ ವೈಜ್ಞಾನಿಕತೆಯ ಉತ್ತುಂಗದಲ್ಲಿರುವ ನಾವು ಆದರ್ಶದ ಹಾದಿ ಮರೆಯುತ್ತಿದ್ದೇವೆ. ಶಿವಶರಣರ ತತ್ವಾದರ್ಶಗಳನ್ನು ಜನಮನದಲ್ಲಿ ಬಿತ್ತಿ ಅಳಿಯುತ್ತಿರುವ ಆದರ್ಶಗಳ ಪುನರುಜ್ಜೀವನಕ್ಕೆ ಪ್ರಯತ್ನಿಸುವ ಉದ್ದೇಶದಿಂದ ಬಸವ ಸಂಸ್ಕೃತಿ ಅಭಿಯಾನ ರಾಜ್ಯಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ನಡೆಯುತ್ತಿದ್ದು, 20ರಂದು ಚಿಕ್ಕಮಗಳೂರಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ನಾಡಿನ ಹಲವು ಪ್ರಮುಖ ಮಠಗಳ ಜಗದ್ಗುರುಗಳು, ಚಿಂತಕರು, ಅನುಭಾವಿಗಳು, ಕಲಾವಿದರು ಆಗಮಿಸಲಿದ್ದಾರೆ ಎಂದರು.

ಕರಡಿಗವಿಮಠದ ಶ್ರೀ ಶಿವಶಂಕರ ಶಿವಯೋಗಿ ಸ್ವಾಮೀಜಿ ಮಾತನಾಡಿ, ಕಡೂರು ತಾಲೂಕು ಶರಣ ಸಾಹಿತ್ಯ ಪರಿಷತ್‌ನ ಕಾರ್ಯಚಟುವಟಿಕೆಗಳು ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಶರಣ ತತ್ವ ಪ್ರಸಾರದಲ್ಲಿ ಶ್ರಾವಣ ಮಾಸದ ಒಂದು ತಿಂಗಳು ತಾಲೂಕಿನಾದ್ಯಂತ ಕಾರ್ಯಕ್ರಮ ಆಯೋಜಿಸಿ ಜನಮಾನಸದಲ್ಲಿ ಶರಣರ ಚಿಂತನೆ ಒಡಮೂಡುವಂತೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಜ್ಞಾನಪ್ರಭು ಸಿದ್ಧರಾಮ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ಬಸವ ಸಂಸ್ಕೃತಿ ಅಭಿಯಾನಕ್ಕೆ ಕಡೂರು ತಾಲ್ಲೂಕಿನ ಜನತೆ ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಿ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಸಾಕ್ಷಿಯಾಗಬೇಕಿದೆ ಎಂದರು.