ಮಂಡ್ಯ: ಸಮಾಜದಲ್ಲಿ ಮಾನವ ಕಳ್ಳ ಸಾಗಣೆ ದೊಡ್ಡ ಸಾಮಾಜಿಕ ಪಿಡುಗಾಗಿ ಪರಿಣಮಿಸಿದೆ. ಮಾತ್ರವಲ್ಲದೆ ಮಕ್ಕಳು, ಯುವತಿಯರನ್ನು ಅಪಹರಿಸಿ ಅಪರಾಧ ಕೃತ್ಯಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವ ಅಗತ್ಯವಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಾಣಿ ಎ.ಶೆಟ್ಟಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಅಂಗವಾಗಿ ನಗರದ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಕ್ಕಳನ್ನು ಲೈಂಗಿಕ ಚಟುವಟಿಕೆ, ಜೀತ ಹಾಗೂ ಬಿಕ್ಷಾಟನೆಗೆ ಬಳಸಿಕೊಳ್ಳುತ್ತಿದ್ದಾರೆ. ಕಳ್ಳ ಸಾಗಾಣಿಕೆಯಲ್ಲಿ ಯಾರೇ ಆಗಲಿ ವಸ್ತು ನೀಡಿ ಆಮಿಷ ನೀಡುತ್ತಾರೆ. ಆದ್ದರಿಂದ ಆಸೆಗೆ ಒಳಪಡದೆ ನಾವೇ ಜಾಗೃತಿಯಿಂದ ಇರಬೇಕು. ಮಾನವ ಕಳ್ಳ ಸಾಗಾಣಿಕೆ ಪ್ರಕರಣಗಳು ಕಂಡು ಬಂದಲ್ಲಿ ಸಂಬಂಧಪಟ್ಟವರಿಗೆ ಮಾಹಿತಿ ನೀಡಬೇಕೆಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಮಾತನಾಡಿ, ಮಾನವ ಸಾಗಾಣಿಕೆಯಲ್ಲಿ ಮಕ್ಕಳು, ಮಹಿಳೆಯರು ದೌರ್ಜನ್ಯಕ್ಕೆ ಬಲಿಪಶು ಆಗುತ್ತಿರುವುದು ದುರ್ದೈವದ ಸಂಗತಿ. ಇಂತಹವುದನ್ನು ತಡೆಯಲು ಜಿಲ್ಲಾ ಮಟ್ಟದ ಕಾರ್ಯಪಡೆ ಇದೆ. ಇದಕ್ಕೆ ಎಲ್ಲ ಇಲಾಖೆಗಳು ಸಹಕಾರ ನೀಡಬೇಕು. ಅರಿವು ಮೂಡಿಸಲು ಸಾರ್ವಜನಿಕರು ಸಹಕಾರ ಕೊಟ್ಟು ಅರಿವು ಮೂಡಿಸಬೇಕು ಎಂದು ಹೇಳಿದರು.
ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಮಿಕ್ಕೆರೆ ವೆಂಕಟೇಶ್ ಮಾತನಾಡಿ, ಮಾನವ ಕಳ್ಳ ಸಾಗಾಣಿಕೆ ಅತಿ ದೊಡ್ಡ ಸವಾಲಾಗಿದೆ. ಇದು ವಾಣಿಜ್ಯವಾಗಿ ವಿಶ್ವದಲ್ಲಿ ಸಾವಿರಾರು ಕೋಟಿ ರೂಗಳ ಮಧ್ಯಸ್ಥಿಕೆಯಲ್ಲಿ ನಡೆಯುತ್ತಿದೆ. ಅಪಹರಣ ಮಾಡಿ ಲೈಂಗಿಕವಾಗಿ ಶೋಷಣೆ ಮಾಡಲಾಗುತ್ತಿದೆ. ಇದು ಶಿಕ್ಷಾರ್ಹ ಅಪರಾಧವಾಗಿದೆ ಎಂದರು.
ಅಪರ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎಸ್.ರಾಜಮೂರ್ತಿ, ಡಿಡಿಪಿಐ ಶಿವರಾಮೇಗೌಡ, ದಕ್ಷಿಣ ವಲಯ ಬಿಇಒ ಉದಯಕುಮಾರ್, ಮಕ್ಕಳ ರಕ್ಷಣಾಧಿಕಾರಿಗಳಾದ ರಾಜೇಂದ್ರ, ಮಹದೇವ್, ಸಂಯೋಜಕಿ ಶೋಭಾ, ವೀರೇಂದ್ರ ಇತರರಿದ್ದರು. ಜಾಥಾ ನ್ಯಾಯಾಲಯದ ಆವರಣದಿಂದ ಹೊರಟು ಜೆ.ಸಿ ವೃತ್ತದ ಮೂಲಕ ಬಾಲಭವನದಲ್ಲಿ ಮುಕ್ತಾಯಗೊಂಡಿತು.