ರಬಕವಿ-ಬನಹಟ್ಟಿ: ಸಮಾಜದಲ್ಲಿ ಇದೀಗ ಮಾನವ ಕಳ್ಳ ಸಾಗಣೆಯು ಬಹುದೊಡ್ಡ ಸಮಸ್ಯೆಯಾಗಿ ಬೆಳೆೆದಿದೆ. ಮಾನವ ಕಳ್ಳ ಸಾಗಣೆಗೆ ಹೆಚ್ಚಾಗಿ ಬಲಿಯಾಗುತ್ತಿರುವವರು ಮಹಿಳೆಯರು ಮತ್ತು ಮಕ್ಕಳು. ಇದರಿಂದ ಎಲ್ಲರೂ ಎಚ್ಚೆತ್ತುಕೊಳ್ಳಬೇಕೆಂದು ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶ ಆಶಪ್ಪ ಸಣಮನಿ ಹೇಳಿದರು.
ಬನಹಟ್ಟಿ ನ್ಯಾಯಾಲಯ ಆವರಣದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಮಾನವ ಕಳ್ಳ ಸಾಗಣೆ ತಡೆ ಹಾಗೂ ದೇವದಾಸಿ ಪದ್ಧತಿ ನಿರ್ಮೂಲನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಡತನದಲ್ಲಿರುವ ಹೆಣ್ಣು ಮಕ್ಕಳಿಗೆ ಹಣದ ಸಹಾಯ ಅಗತ್ಯವಿರುತ್ತದೆ. ಹೆಂಗಸರು ಆಮಿಷಗಳಿಗೆ ಬಲಿಯಾಗಿ ಮೋಸ ಹೋಗುವುದನ್ನು ತಡೆಯಬೇಕು. ಮಕ್ಕಳನ್ನು ಪೋಷಕರು ತುಂಬ ಜಾಗ್ರತೆಯಿಂದ ಬೆಳೆಸಬೇಕು. ಮಕ್ಕಳಿಗೆ ಯಾವುದು ಸರಿ, ಯಾವುದು ತಪ್ಪು ಎಂಬ ವಿಚಾರಗಳನ್ನು ತಿಳಿಸಿಕೊಡಬೇಕೆಂದರು.
ಅನಿಷ್ಟ ಪದ್ಧತಿಯಾದ ದೇವದಾಸಿ ಪದ್ಧತಿ ನಿರ್ಮೂಲನೆಗೆ ಸರ್ಕಾರ ಹಲವರು ಕಾನೂನು ಜಾರಿಗೆ ತಂದಿದೆ. ಅವುಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು. ದೇವದಾಸಿಯರಿಗೆ ಸರ್ಕಾರಿ ಸೌಲಭ್ಯಗಳು ದೊರೆಯದಿದ್ದರೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಗಮನಕ್ಕೆ ತರಬೇಕು ಎಂದರು.
ಹಿರಿಯ ನ್ಯಾಯವಾದಿ ಎಂ.ಪಿ. ಮದರಖಂಡಿ ಮಾತನಾಡಿ, ದೇವದಾಸಿ ಪದ್ಧತಿ ನಿರ್ಮೂಲನೆಗೆ ಸರ್ಕಾರದಿಂದ ಜಾಗೃತಿ, ಆರೋಗ್ಯ ಶಿಬಿರ ನಡೆಸಲಾಗುತ್ತಿದೆ. ದೇವದಾಸಿ ಮಹಿಳೆಯರಿಗೆ ಸ್ವ ಉದ್ಯೋಗಕ್ಕೆ ಸಾಲ ಸೌಲಭ್ಯ, ಸಹಾಯ ಧನ ನೀಡಲಾಗುವುದು ಹಾಗೂ ಮಾಜಿ ದೇವದಾಸಿಯರಿಗೆ ಮಾಸಾಶನ, ವಸತಿ ಸೌಲಭ್ಯಗಳನ್ನೂ ಸರ್ಕಾರ ಕಲ್ಪಿಸಿ ಕೊಡುತ್ತದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಶ್ರೀಕಾಂತ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ರವೀಂದ್ರ ಸಂಪಗಾಂವಿ, ಆರ್.ಡಿ. ಸರಿಕರ, ಎಂ.ಜಿ. ಕೆರೂರ, ಎ.ಎಂ. ಪೆಂಡಾರಿ, ರವೀಂದ್ರ ಕಾಮಗೊಂಡ, ಎ.ಎಸ್. ಗಾಡಬೋಲೆ, ಎಸ್.ಕೆ. ಕೋಪರ್ಡೆ, ಸುಜಾತಾ ನಿಡೋಣಿ, ಬಿ.ಆರ್. ಮದರಖಂಡಿ ಅನೇಕ ನ್ಯಾಯವಾದಿಗಳಿದ್ದರು.