ಭದ್ರಾವತಿ: ಜಾತಿ ಯಾವುದೇ ಇರಲಿ ಮನುಷ್ಯ ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳಬೇಕು. ಸನಾಜದಲ್ಲಿನ ಎಲ್ಲ ಸಮುದಾಯದ ಜನರೂ ಸಮಾನತೆಯ ಗುಣವನ್ನು ಬೆಳೆಸಿಕೊಂಡು ಉತ್ತಮ ಬಾಂಧವ್ಯದಿAದ ಬದುಕಬೇಕು ಎಂದು ಬ್ರಹ್ಮಶ್ರೀ ನಾರಾಯಣ ಗುರುಗಳು ತಿಳಿಸಿದ್ದಾರೆ ಎಂದು ಶ್ರೀ ನಾರಾಯಣಗುರು ವಿಚಾರ ವೇದಿಕೆ ಜಿಲ್ಲಾಧ್ಯಕ್ಷ ಪ್ರವೀಣ್ ಹಿರೇ ಹಿಡಗೋಡು ಹೇಳಿದರು.
ತಾಲೂಕು ಆಡಳಿತದ ಸಹಯೋಗದಲ್ಲಿ ಶ್ರೀನಾರಾಯಣಗುರು ವಿಚಾರ ವೇದಿಕೆ ತಾಪಂ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ 169ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
12ನೇ ಶತಮಾನದಲ್ಲಿ ಬಸವಣ್ಣ, ಅಕ್ಕಮಹಾದೇವಿಯಂತೆ ಸಮಾಜ ಸುಧಾರಣೆಯಲ್ಲಿ ತೊಡಗಿಸಿಕೊಂಡವರಲ್ಲಿ ನಾರಾಯಣ ಗುರುಗಳೂ ಒಬ್ಬರು. ಅಂದಿನ ಕಾಲದಲ್ಲಿದ್ದ ಅಸ್ಪ Èಶ್ಯತೆ, ಬಾಲ್ಯವಿವಾಹದಂತಹ ಅನಿಷ್ಟ ಪದ್ಧತಿಗಳನ್ನು ಮಟ್ಟ ಹಾಕಿ ಎಲ್ಲರಿಗೂ ಶಿಕ್ಷಣ ಕೊಡುವ ಮೂಲಕ ಸಮಾನತೆ ಸಾರಿದ ಮಹಾನ್ ವ್ಯಕ್ತಿ. ಅವರ ಆಶಯಗಳನ್ನು ಸಮಾಜಕ್ಕೆ ತಿಳಿಸುವ ಅಗತ್ಯವಿದೆ ಎಂದರು.
ಹುಚ್ಚರ ನಾಡು ಎಂದು ಕರೆಸಿಕೊಂಡಿದ್ದ ಕೇರಳವನ್ನು ಅಕ್ಷರಸ್ತರ ನಾಡು ಹಾಗೂ ದೇವರನಾಡು ಎಂದು ಕರೆಸಿಕೊಳ್ಳುವಂತೆ ಮಾಡಿದ ನಾರಾಯಣ ಗುರುಗಳ ತತ್ವ ಸಿದ್ದಾಂತಗಳನ್ನು ನಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಬೇಕಾಗಿದೆ. ಜಾತಿ ಬದಲಾಗಿ ಮಾನವಕುಲ ಒಂದೇ ಎಂದು ಹೇಳುವ ಅಗತ್ಯವಿದೆ ಎಂದರು.
ತಹಸೀಲ್ದಾರ್ ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ನಾರಾಯಣಗುರುಗಳ ಜೀವನ ಚರಿತ್ರೆ ಹಾಗೂ ಅವರ ಆದರ್ಶಗಳ ಕುರಿತು ಶಿವಮೊಗ್ಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ಅಣ್ಣಪ್ಪ ಮಳಿಮಠ್ ಉಪನ್ಯಾಸ ನೀಡಿದರು. ಕಾರ್ಯಕ್ರಮಕ್ಕೂ ಮುನ್ನ ನಗರದ ಅಪ್ಪರ್‌ಹುತ್ತಾದಿಂದ ಪ್ರಮುಖ ರಸ್ತೆಗಳಲ್ಲಿ ನಾರಾಯಣ ಗುರುಗಳ ಭಾವಚಿತ್ರ ಮೆರವಣಿಗೆ ನಡೆಸಲಾಯಿತು.
ಗ್ರೇಡ್-2 ತಹಸೀಲ್ದಾರ್ ರಂಗಮ್ಮ, ಇಒ ಗಂಗಣ್ಣ, ನಾರಾಯಣ ಗುರು ವಿಚಾರ ವೇದಿಕೆ ತಾಲೂಕು ಅಧ್ಯಕ್ಷ ಎನ್.ನಟರಾಜ್, ಕೋಗಲೂರು ತಿಪ್ಪೇಸ್ವಾಮಿ, ಗಂಗಾಧರ್, ಭಾಗ್ಯಮ್ಮ ಪುಟ್ಟಸ್ವಾಮಿ ಗೌಡ, ಎಸ್.ಉಪೇಂದ್ರ, ಪಂಚಾಕ್ಷರಪ್ಪ ಸೇರಿ ಇತರರಿದ್ದರು.