ದೇವದುರ್ಗ: ಭಾರತ ವಿಶ್ವದಲ್ಲೇ ಶ್ರೇಷ್ಠ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿದ್ದು, ನಮ್ಮ ಪ್ರಜಾಪ್ರಭುತ್ವ ಹಲವು ದೇಶಗಳಿಗೆ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ಕೆ.ನಿತೀಶ್ ಹೇಳಿದರು.
ತಾಲೂಕಿನ ಗೂಗಲ್ ಅಲ್ಲಮಪ್ರಭು ದೇವಸ್ಥಾನದ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಾಗೂ ಮಾನವ ಸರಪಳಿ ಅಭಿಯಾನಕ್ಕೆ ಚಾಲನೆ ನೀಡಿ ಭಾನುವಾರ ಮಾತನಾಡಿದರು. ರಾಜ್ಯದಲ್ಲಿ 2500 ಕಿಮೀ ಉದ್ದದ ಮಾನವ ಸರಪಳಿ ಅಭಿಯಾನ ಹಮ್ಮಿಕೊಂಡಿದ್ದು, 31ಜಿಲ್ಲೆಗಳು ಭಾಗವಹಿಸಿ ವಿಶ್ವದಾಖಲೆ ಮಾಡಲಾಗಿದೆ.
ಸಮಾಜದ ಎಲ್ಲವರ್ಗದ ಜನರು ಏಕಕಾಲಕ್ಕೆ ಕೈಕೈ ಹಿಡಿದು ಮಾನವ ಸರಪಳಿ ರಚಿಸಿ ಜಗತ್ತಿಗೆ ಏಕತೆಯ ಸಂದೇಶ ನೀಡಲಾಗಿದೆ. ಸಂವಿಧಾನದ ಪ್ರಸ್ತಾವನೆ ಓದುವ ಮೂಲಕ ಜನರಿಗೆ ಪ್ರಜಾಪ್ರಭುತ್ವದ ಮಹತ್ವ ತಿಳಿಸಲಾಗಿದೆ. ಈ ದಿನದ ನೆನಪಿಗಾಗಿ ರಾಜ್ಯಾದ್ಯಂತ 10 ಲಕ್ಷ ಸಸಿ ನೆಡಲಾಗುತ್ತಿದೆ. ಜಿಲ್ಲೆಯಲ್ಲಿ 8 ತಾಲೂಕಿನ ಅಧಿಕಾರಿಗಳು, ನೌಕರರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ದೇವದುರ್ಗ ತಾಲೂಕಿನಲ್ಲಿ 65ಸಾವಿರ ಹಾಗೂ ಜಿಲ್ಲೆಯಲ್ಲಿ ಒಂದು ಲಕ್ಷ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಜಗದೀಶ್ ಸಂಪಗಾವಿ ಪ್ರತಿಜ್ಞಾವಿಧಿ ಬೋಧಿಸಿದರು. ಇದಕ್ಕು ಮುನ್ನ ಸಸಿಗೆ ನೀರು ಹಾಕಿ ಗೂಗಲ್ ಬ್ರಿಡ್ಜ್ ಕಂ ಬ್ಯಾರೇಜ್ ಮೇಲೆ ಯಾದಗಿರಿ ಜಿಲ್ಲೆಯ ಮಾನವ ಸರಪಳಿ ಚೈನ್‌ಲಿಂಕ್ ಸ್ವಾಗತಿಸಲಾಯಿತು. ಅಲ್ಲಿಂದ ದೇವದುರ್ಗ, ಕರಿಗುಡ್ಡ, ಜಾಲಹಳ್ಳಿ, ಬುಂಕಲದೊಡ್ಡಿ, ತಿಂಥಣಿಬ್ರಿಡ್ಜ್ ಮೂಲಕ ಲಿಂಗಸುಗೂರಿಗೆ ಚೈನ್‌ಲಿಂಕ್ ನೀಡಲಾಯಿತು.
ಜಿಪಂ ಸಿಇಒ ರಾಹುಲ್ ತುಕರಾಮ್ ಪಾಂಡ್ವೆ, ಎಸ್ಪಿ ಪುಟ್ಟಮಾದಯ್ಯ, ಆದಿಜಾಂಬವ ನಿಗಮದ ಜಿಲ್ಲಾ ಕಲ್ಯಾಣಾಧಿಕಾರಿ ರಾಜೇಂದ್ರ ಜಲ್ದಾರ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಚಿದಾನಂದಪ್ಪ ಕುರಿ, ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ, ತಾಪಂ ಇಒ ಬಸವರಾಜ ಹಟ್ಟಿ, ಗೂಗಲ್ ಗ್ರಾಪಂ ಅಧ್ಯಕ್ಷೆ ಸೋಮಲಿಂಗಮ್ಮ, ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.