ಅಂಕೋಲಾ: ಕೇಣಿಯ ಸಮುದ್ರದಲ್ಲಿ ಖಾಸಗಿ ವಾಣಿಜ್ಯ ಬಂದರು ನಿರ್ಮಾಣಕ್ಕೆ ಮುಂದಾಗಿರುವುದನ್ನು ಖಂಡಿಸಿ ವಿವಿಧ ತಾಲೂಕಿನ ಮೀನುಗಾರರು ಮೀನುಗಾರಿಕೆ ಸ್ಥಗಿತಗೊಳಿಸಿ ಮತ್ತು ತಾಲೂಕಿನ ಮೀನು ಮಾರುಕಟ್ಟೆ ಬಂದ್ ಮಾಡಿಸಿ ಬುಧವಾರ ಬೇಲೆಕೇರಿ ಸಮುದ್ರ ತೀರದಲ್ಲಿ ಬೃಹತ್ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.
ಕೇಣಿಯಲ್ಲಿ ನಡೆಯಬೇಕಿದ್ದ ಪ್ರತಿಭಟನೆಗೆ ಎಸ್ಪಿ ಎಂ. ನಾರಾಯಣ ಅವರು ಕೇಣಿ, ಭಾವಿಕೇರಿ ವ್ಯಾಪ್ತಿಯ 500 ಮೀ. ನಿಷೇಧಾಜ್ಞೆ ಇರುವುದರಿಂದ ಅನುಮತಿ ನೀಡುವುದಿಲ್ಲ. ಒಂದು ವೇಳೆ ಪ್ರತಿಭಟನೆ ನಡೆಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚ ರಿಕೆ ನೀಡಿದ್ದರಿಂದಾಗಿ ಅನಿವಾರ್ಯವಾಗಿ ಬೇಲೆಕೇರಿಯಲ್ಲಿ ಪ್ರತಿಭಟನೆ ನಡೆಸಿದರು.
ಬೆಲೆಕೇರಿಯ ಕಡಲ ತೀರದಲ್ಲಿ ನೂರಾರು ಮಹಿಳೆಯರು, ಮೀನುಗಾರರು ಸಮುದ್ರದುದ್ದಕ್ಕೂ ಮಾನವ ಸರಪಳಿ ರಚಿಸಿ ಖಾಸಗಿ ಬಂದರು ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿದರು. 300ಕ್ಕೂ ಹೆಚ್ಚು ಯಾಂತ್ರಿಕ ದೋಣಿ ಸೇರಿದಂತೆ ಬೋಟುಗಳು ಸಮುದ್ರದಲ್ಲಿ ಜಮಾಯಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಮೀನುಗಾರರ ಬದುಕನ್ನು ಕಸಿದುಕೊಳ್ಳುವ ವಾಣಿಜ್ಯ ಬಂದರು ಬೇಡವೇ ಬೇಡ ಎಂಬ ಸ್ಪಷ್ಟ ಸಂದೇಶ ಸಾರಿದರು. ಕೇಣಿ ಸಮುದ್ರ ದಡದಲ್ಲಿ ಜೆಎಸ್‌ಡಬ್ಲುೃ ಕಂಪನಿಯವರು ನಿರ್ಮಿಸಲು ಉದ್ದೇಶಿಸಿರುವ ವಾಣಿಜ್ಯ ಬಂದರಿನ ಸರ್ವೇ ಕಾರ್ಯ ಸ್ಥಗಿತಗೊಳಿಸಬೇಕೆಂದು ಮುಖ್ಯಮಂತ್ರಿಗೆ ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ ಅವರು ಬೇಲೆಕೇರಿಯ ಕರಾವಳಿ ಕಾವಲು ಪಡೆ ಬೋಟ್ ಮೂಲಕ ತೆರಳಿ ಬೋಟ್‌ನಲ್ಲಿ ಪ್ರತಿಭಟನೆ ಮಾಡುತ್ತಿದ್ದ ಮೀನುಗಾರರಿಂದ ಮನವಿಯನ್ನು ಸ್ವೀಕರಿಸಿದರು.
ಮೀನುಗಾರರ ಪ್ರಮುಖರಾದ ನಾಗೇಶ್ ಖಾರ್ವಿ, ಉದಯ ನಾಯಕ, ಪ್ರಮೋದ ಬಾನವಳಿಕರ ಮಾತನಾಡಿದರು. ಹೂವಾ ಖಂಡೇಕರ, ಸಂಜೀವ ಬಲೆಗಾರ, ಚಂದ್ರಕಾಂತ ಹರಿಕಂತ್ರ, ವೆಂಕಟೇಶ ದುರ್ಗೇಕರ್, ಸೂರಜ ಹರಿಕಂತ್ರ, ಶಂಕರ ಬಲೆಗಾರ, ಸರಿತಾ ಬಲೇಗಾರ, ಶೇಖರ ಹರಿಕಂತ್ರ, ಉಮಕಾಂತ ಹರಿಕಂತ್ರ, ನೂರಾರು ಮಹಿಳೆಯರು ಉಪಸ್ಥಿತರಿದ್ದರು.
ಸಾವಿರಾರು ಮಹಿಳೆಯರು ಸಮುದ್ರ ತೀರದಲ್ಲಿ ನಿಂತು ಯೋಜನೆಯ ವಿರುದ್ಧ ಧಿಕ್ಕಾರ ಕೂಗಿದರು. ಎಸ್ಪಿ ನಾರಾಯಣ ಎಂ. ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಗಿರೀಶ, ಪಿಐ ಚಂದ್ರಶೇಖರ ಮಠಪತಿ ನೇತೃತ್ವದಲ್ಲಿ 300ಕ್ಕೂ ಹೆಚ್ಚು ಪೊಲೀಸರು ಬಂದೋಬಸ್ ಮಾಡಿದ್ದರು.
ಹಕ್ಕು ದಮನ ಸರಿಯಲ್ಲ
ಯಾವುದೇ ಕಾರಣಕ್ಕೂ ಕೇಣಿಯಲ್ಲಿ ಖಾಸಗಿ ಬಂದರು ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ. ನಮ್ಮ ಹಕ್ಕನ್ನು ದಮನ ಮಾಡುತ್ತಿರುವುದು ಸರಿಯಲ್ಲ ಎಂದು ಉ.ಕ. ಮೀನು ಮಾರಾಟ ಫೆಡರೇಷನ್ ಮಾಜಿ ಅಧ್ಯಕ್ಷ ಗಣಪತಿ ಮಾಂಗ್ರೆ ಆಕ್ರೋಶ ವ್ಯಕ್ತಪಡಿಸಿದರು.
ಮೀನುಗಾರಿಕಾ ಫೆಡರೇಷನ್ ನಿರ್ದೇಶಕ ರಾಜು ಹರಿಕಾಂತ ಮಾತನಾಡಿ, ಒಮ್ಮೆ ಸರ್ವೇ ಮಾಡಿ ನಡೆದರೆ ಮತ್ತೆ ಈ ಯೋಜನೆ ಜಾರಿಗೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ. ಆ ಸಮಯದಲ್ಲಿ ಮೀನುಗಾರರನ್ನು ಎತ್ತಂಗಡಿ ಮಾಡಿಸಿ ಬೀದಿ ಪಾಲು ಮಾಡುತ್ತಾರೆ ಎಂದರು.
ಶ್ರೀಕಾಂತ ದುರ್ಗೇಕರ ಮಾತನಾಡಿ, ನಮ್ಮ ಪರವಾಗಿ ಇರಬೇಕಾಗಿದ್ದ ಜನಪ್ರತಿನಿಧಿಗಳು ಈಗ ನಮ್ಮನ್ನು ಬಲಿಕೊಡಲು ಹೊರಟಿದ್ದಾರೆ. ಮೀನುಗಾರರಿಗೆ ಸಮುದ್ರ ಬಿಟ್ಟರೆ ಬೇರೆ ಪ್ರಪಂಚವಿಲ್ಲ. ಖಾಸಗಿ ವಾಣಿಜ್ಯ ಬಂದರು ಮಾಡುವ ಮೂಲಕ ನಮ್ಮನ್ನು ಎತ್ತಂಗಡಿ ಮಾಡಿಸಿದರೆ ನಾವು ನಮ್ಮ ಸ್ವಾಭಿಮಾನವನ್ನು ಬಿಟ್ಟು, ಹಮಾಲಿ ಕೆಲಸ ಅಥವಾ ಜೀತಕ್ಕೆ ದುಡಿಯಬೇಕಾಗುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ಬಂದರು ನಿರ್ಮಾಣ ಮಾಡಬಾರದು ಎಂದರು.