ಮೈಸೂರು: ಕೇಂದ್ರ ಸರ್ಕಾರದ ಮಾದಕ ವಸ್ತು ನಿಯಂತ್ರಣ ಘಟಕದ ಮೈಸೂರು ವಲಯ ಆಶ್ರಯದಲ್ಲಿ ಜೂ.26 ರಂದು ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ದುಶ್ಚಟದ ವಿರುದ್ಧ ಅರಿವು ಮೂಡಿಸುವ ಮಾನವ ಬೃಹತ್ ಸರಪಳಿ ರಚನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಅಗರ್ವಾಲ್ ಸಮಾಜದ ಮುಖ್ಯಸ್ಥ ಡಾ.ಎಸ್.ಕೆ.ಮಿತ್ತಲ್ ತಿಳಿಸಿದರು.
ಅಂದು ಬೆಳಗ್ಗೆ 10ಕ್ಕೆ ಆರಂಭವಾಗುವ ಮಾನವ ಸರಪಳಿ ರಚನೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಎನ್‌ಸಿಸಿ ಕೆಡೆಟ್‌ಗಳು ಪಾಲ್ಗೊಳ್ಳುತ್ತಿದ್ದಾರೆ. ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್, ಕುಲಸಚಿವೆ ವಿ.ಆರ್.ಶೈಲಜಾ, ಎನ್‌ಸಿಸಿ ಅಧಿಕಾರಿ ಕರ್ನಲ್ ರೋಹಿತ್ ಠಾಕೂರ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಾನಿಕಾರಕ ಎಂದು ತಿಳಿದಿದ್ದರೂ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಯುವಜನರು, ಮಕ್ಕಳು ಮಾದಕ ವಸ್ತು ಬಳಕೆಗೆ ಬಲಿಯಾಗುತ್ತಿದ್ದಾರೆ. ಹೀಗಾಗಿ ಅವರಲ್ಲಿ ಈ ದುಶ್ಚಟದ ವಿರುದ್ಧ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಆಯೋಜಕರಾದ ಡಾ.ರಂಗನಾಥ್, ಮಂಜುನಾಥ್, ದತ್ತಾತ್ರೇಯ ಶಿಂಧೆ ಇದ್ದರು.