ಜಿಲ್ಲೆ

ಡೆಂಗ್ಯೂ ತಡೆಗಟ್ಟಲು ಸಾರ್ವಜನಿಕರಲ್ಲಿ ಜಾಗೃತಿ ಅಗತ್ಯ

ಉಡುಪಿ: ಡೆಂಗ್ಯೂ ಸೋಂಕು ಹೊಂದಿದ ಈಡೀಸ್​ ಸೊಳ್ಳೆಯ ಮೂಲಕ ಹರಡುವ ವೈರಸ್​ ಜ್ವರ. ನಿಂತ ನೀರಿನಲ್ಲಿ ಈ ಸೊಳ್ಳೆಗಳ ಸಂತಾನೋತ್ಪತ್ತಿಯಾಗುತ್ತವೆ. ಇವುಗಳನ್ನು ನಾಶಪಡಿಸಲು ಹಾಗೂ ಡೆಂಗ್ಯೂ ರೋಗ ಹರಡದಂತೆ ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಸಾರ್ವಜನಿಕರಿಗೆ ವ್ಯಾಪಕ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಹೇಳಿದರು.

ಶುಕ್ರವಾರ ಅಲೆವೂರು ಪ್ರಗತಿನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೆೇರಿ ಹಾಗೂ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಮಾನವ ಸರಪಳಿ ಜನಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ವಿದ್ಯಾರ್ಥಿಗಳು ರಾಯಭಾರಿಗಳಾಗಿ- ಸಮುದಾಯದಲ್ಲಿ ಜಾಗೃತಿ ಮೂಡಿಸಿ ಡೆಂಗ್ಯೂ ನಿಯಂತ್ರಣಕ್ಕೆ ಸಹಕರಿಸಬೇಕು. ಜಿಲ್ಲೆಯಲ್ಲಿ ಡೆಂಗ್ಯೂ ಹಾಗೂ ಇನ್ನಿತರೆ ಕೀಟ ಜನ್ಯ ಕಾಯಿಲೆಗಳನ್ನು ನಿಯಂತ್ರಿಸಿ ಆರೋಗ್ಯಕರ ಉಡುಪಿ ಜಿಲ್ಲೆಯನ್ನಾಗಿಸಲು ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.

ಅಲೆವೂರು ಪಂಚಾಯಿತಿ ಅಧ್ಯಕ್ಷ ಯತೀಶ್​ ಕುಮಾರ್​, ಸದಸ್ಯ ಶ್ರೀಕಾಂತ್​ ನಾಯಕ್​, ತಾಲೂಕು ಆರೋಗ್ಯಾಧಿಕಾರಿ ಡಾ.ವಾಸುದೇವ ಉಪಾಧ್ಯಾಯ, ರೋಟರಿ ಮಣಿಪಾಲ್​ ಹಿಲ್ಸ್​ ಅಧ್ಯಕ್ಷೆ ಸುಪರ್ಣ ಶೆಟ್ಟಿ, ಸದಸ್ಯರಾದ ಸುದೇಶ್​ ರೈ, ಸುಂದರ ಶೆಟ್ಟಿ ಹಾಗೂ ಭೋಜರಾಜ್​, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಶಿವಕುಮಾರ್​ ಮತ್ತು ಸಂಯೋಜಕರಾದ ಅನಿತಾ ಹಾಗೂ ಮಧುಸೂಧನ್​, ಕೀಟಶಾಸ್ತ್ರಜ್ಞೆ ಮುಕ್ತಾ ಆಚಾರಿ, ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್​ ಎಚ್​. ಮತ್ತು ಚಂದ್ರಕಲಾ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಪ್ರಶಾಂತ್​ ಭಟ್​, ಸ್ವಾಗತಿಸಿ ನಿರೂಪಿಸಿದರು, ಮಣಿಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಂಜಲಿ ವಾಗ್ಲೆ ವಂದಿಸಿದರು.