ಹುಳಿಯಾರು : ಚಿಕ್ಕನಾಯಕನಹಳ್ಳಿ ತಾಲೂಕು ಹಂದನಕೆರೆ ಹೋಬಳಿಯ ಬರಗೂರು ಗ್ರಾಪಂ ವ್ಯಾಪ್ತಿಯ ಗದ್ದಗೇರಹಟ್ಟಿ ಗ್ರಾಮದಲ್ಲಿ ನಲ್ಲಿ ನೀರು ಕುಡಿದು 10ರಿಂದ 15 ಮಂದಿ ವಾಂತಿ, ಭೇದಿಯಿಂದ ಅಸ್ವಸ್ಥಗೊಂಡಿದ್ದಾರೆ.
ಗ್ರಾಮದ ಪಾಲಾಕ್ಷಯ್ಯ, ವೇದಮೂರ್ತಿ, ಶಂಕರಯ್ಯ, ಲಿಂಗದೇವರು, ಚಂದ್ರಯ್ಯ, ಕದುರಪ್ಪ, ಪ್ರಶಾಂತ್, ಕುದುರೆಚಿತ್ತಯ್ಯ, ಶಂಕರಮ್ಮ, ಕಾವ್ಯ, ಶೃತಿ, ಸಂತೋಷ್, ಹರೀಶ್, ಯಶೋದಮ್ಮ, ಕೊಟ್ರೇಶ್, ಮರುಳಯ್ಯ, ಕೃಷ್ಣಪ್ಪ, ಶಿವಯ್ಯ, ಗೌರಮ್ಮ, ಚಿದಾನಂದ, ಮಮತಾ, ಪೂಜಾ, ಗುರುಸ್ವಾಮಿ, ಅರುಣ್ ಕುಮಾರ್ ಅಸ್ವಸ್ಥಗೊಂಡವರು.
ನಾಲ್ಕೈದು ವರ್ಷದಿಂದ ಓವರ್ ಹೆಡ್ ಟ್ಯಾಂಕ್ ಸ್ವಚ್ಛಗೊಳಿಸದೆ ನೀರು ಪೂರೈಸಲಾಗುತ್ತಿದ್ದು, ಇಡೀ ಊರೇ ಅನಾರೋಗ್ಯಕ್ಕೆ ತುತ್ತಾಗಿದೆ ಎಂದು ಸ್ಥಳೀಯರು ಆರೋಪಿಸಿದರು. ಟ್ಯಾಂಕ್ ಸ್ವಚ್ಛಗೊಳಿಸಲು ಪಿಡಿಒ ಮತ್ತು ನೀರುಗಂಟಿ ಗಮನಕ್ಕೆ ತಂದರೂ ನಿರ್ಲಕ್ಷ್ಯಿಸಿದ ಫಲವಾಗಿ ಇಂದು ಊರಿನ ಜನ ವಾಂತಿಭೇದಿಗೆ ತುತ್ತಾಗಿದ್ದಾರೆ. ಘಟನೆಗೆ ಕಾರಣರಾದವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಘಟನೆ ತಿಳಿದ ತಕ್ಷಣ ಟಿಎಚ್‌ಒ ನವೀನ್ ನೇತೃತ್ವದಲ್ಲಿ ಗೂಬೆಹಳ್ಳಿ ಸರ್ಕಾರಿ ಆಸ್ಪತ್ರೆ ವೈದ್ಯ ಭರತ್, ಮತಿಘಟ್ಟ ಸರ್ಕಾರಿ ಆಸ್ಪತ್ರೆ ವೈದ್ಯ ಮಧುರಂಜನ್ ಸೇರಿ ಆರೋಗ್ಯ ಇಲಾಖೆ ಸಿಬ್ಬಂದಿ ಗ್ರಾಮದಲ್ಲಿ ಬೀಡು ಬಿಟ್ಟು ಚಿಕಿತ್ಸೆ ನೀಡಿದ್ದಾರೆ. ಈಗ ಕಾಯಿಲೆ ಹತೋಟಿಗೆ ಬಂದಿದೆ.
ಸೋಮವಾರ ವರದಿ ಬರುವ ನಿರೀಕ್ಷೆ : ಮಾ.2 ರಂದು ಐದಾರು ಮಂದಿ ಮತ್ತಿಘಟ್ಟ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದ್ದಾರೆ. ತಕ್ಷಣ ಮತ್ತಿಘಟ್ಟ ವೈದ್ಯರು ಗೂಬೆಹಳ್ಳಿ ವೈದ್ಯರೊಂದಿಗೆ ಗ್ರಾಮಕ್ಕೆ ತೆರಳಿ ತಪಾಸಣೆಗೆ ಮುಂದಾದಾಗ ಏಳೆಂಟು ಮಂದಿಗೆ ವಾಂತಿ, ಭೇದಿಯಾಗುತ್ತಿರುವುದು ಪತ್ತೆಯಾಗಿದೆ. ಇಬ್ಬರು ವೈದ್ಯರೂ ಸೂಕ್ತ ಚಿಕಿತ್ಸೆ ನೀಡಿ ಹಿಂದಿರುಗಿದ್ದಾರೆ. ರಾತ್ರಿ ಮತ್ತೆ ನಾಲ್ಕು ಮಂದಿ ಅಸ್ವಸ್ಥಗೊಂಡ ಪರಿಣಾಮ ಹಾಸನ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ಮರುದಿನ ನಾನೂ ಸೇರಿ ಇಬ್ಬರು ವೈದ್ಯರು, ದಾದಿಯರ ತಂಡ ಕ್ಯಾಂಪ್ ಮಾಡಿ 15-20ಮಂದಿಗೆ ಚಿಕಿತ್ಸೆ ನೀಡಿದ್ದೇವೆ. ಶನಿವಾರ ಮತ್ತೆ ಇಬ್ಬರಿಗೆ ವಾಂತಿಭೇದಿ ಕಾಣಿಸಿಕೊಂಡಿದ್ದು, ಉಳಿದವರು ಆರೋಗ್ಯದಿಂದಿದ್ದಾರೆ. ಮೇಲ್ನೋಟಕ್ಕೆ ನೀರಿನಿಂದ ಹೀಗಾಗಿರಬಹುದೆಂದು ಊಹಿಸಲಾಗಿದ್ದು, ಲ್ಯಾಬ್‌ಗೆ ಕಳುಹಿಸಿಕೊಡಲಾಗಿದೆ. ಸೋಮವಾರ ವರದಿ ಬರುವ ನಿರೀಕ್ಷೆಯಲ್ಲಿದ್ದೇವೆ ಎಂದು ಚಿಕ್ಕನಾಯಕನಹಳ್ಳಿ ಟಿಎಚ್‌ಒ ನವೀನ್ ತಿಳಿಸಿದರು.
15 ದಿನಕ್ಕೊಮ್ಮೆ ಟ್ಯಾಂಕ್‌ಗಳನ್ನು ಸ್ವಚ್ಛ ಮಾಡಿಸುತ್ತಿದ್ದೇವೆ. ನೀರಿನಿಂದ ಈ ರೀತಿ ಆಗಲು ಸಾಧ್ಯವೇ ಇಲ್ಲ. ಟ್ಯಾಂಕ್ ಶುಚಿಯಾಗಿದೆ. ವೈದ್ಯರು ಲ್ಯಾಬಿಗೆ ನೀರಿನ ಸ್ಯಾಂಪಲ್ ಕಳಿಸಿದ್ದಾರೆ. ಈ ನಡುವೆ ನೀರಿನಿಂದ ಹೀಗಾಗಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಮೊದಲು ಒಂದೇ ಮನೆಯ ನಾಲ್ವರಿಗೆ ಹೀಗಾಗಿತ್ತು. ನಂತರ ಕೆಲವರಿಗೆ ವಾಂತಿ-ಭೇದಿ ಆಗಿದೆ. ಆಹಾರದಲ್ಲಿ ವ್ಯತ್ಯಾಸವಾಗಿ ಹೀಗಾಗಿರಬಹುದು, ಲ್ಯಾಬ್ ವರದಿ ಬಂದ ನಂತರ ಸತ್ಯ ತಿಳಿಯುತ್ತದೆ. ಕೃಷ್ಣ ಬಾಯಿ ಭಂಡಾರಿ, ಪಿಡಿಒ, ಬರಗೂರು ಗ್ರಾಪಂ ನಾಲ್ಕು ವರ್ಷದಿಂದ ಓವರ್ ಹೆಡ್‌ಟ್ಯಾಂಕ್ ಸ್ವಚ್ಛ ಮಾಡಿಲ್ಲ. ಇವತ್ತು ಬಂದು ಕ್ಲೀನ್ ಮಾಡಿಸುತ್ತಿದ್ದಾರೆ. ಅಲ್ಲದೆ ಊರಿನ ಕೆಳಗಿನ ಭಾಗಕ್ಕೆ ನೀರು ಪೂರೈಸುವ ಪೈಪು ಒಡೆದಿದೆ. ಆದರೂ ದುರಸ್ತಿ ಮಾಡದ ಪರಿಣಾಮ ಕೊಳಚೆ ನೀರು ಪೈಪ್ ಮುಖಾಂತರ ಸರಬರಾಜಾಗಿ ಇದನ್ನು ಕುಡಿದವರು ಅಸ್ವಸ್ಥರಾಗಿದ್ದಾರೆ. ಗ್ರಾಪಂ ಸದಸ್ಯರು, ಪಿಡಿಒ ಸಹ ನೀರು ಗಂಟಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇಂದೂ ಸಹ 10-15 ಮಂದಿಗೆ ವಾಂತಿಭೇದಿಯಾಗಿದೆ. ವೈದ್ಯರು ನಿತ್ಯವೂ ಬಂದು ಚಿಕಿತ್ಸೆ ನೀಡುತ್ತಿದ್ದಾರೆ. ಪಂಚಾಯಿತಿಯವರು ಪೈಪು ದುರಸ್ತಿ ಮಾಡಿಸಿಲ್ಲ. ಬದಲಿ ನೀರಿನ ವ್ಯವಸ್ಥೆ ಮಾಡಿಲ್ಲ. ಕೊಟ್ರೇಶ್, ಗ್ರಾಮಸ್ಥ ಗದ್ದಿಗೆ ಹಟ್ಟಿ