ಹುಳಿಯಾರು : ಉದ್ಘಾಟನೆಯ ದಿನ ಬಿಟ್ಟರೆ ಇನ್ನೆಂದೂ ಹುಳಿಯಾರಿನ ಮಾರುತಿ ನಗರದ ಈ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ನೀರು ಬಂದಿಲ್ಲ. ಹೀಗಾಗಿ ಹದಿನೈದಿಪ್ಪತ್ತು ರೂಪಾಯಿ ದುಡ್ಡು ಕೊಟ್ಟು ನೀರು ಖರೀದಿಸಿ ಕುಡಿಯಬೇಕಿದೆ.
ಶಾದಿ ಮಹಲ್ ಸಮೀಪ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 2019-20 ನೇ ಸಾಲಿನ ಮುಖ್ಯಮಂತಿ ಅಭಿವೃದ್ಧಿ ಯೋಜನೆಯಡಿ ಲಕ್ಷಾಂತರ ರೂ. ವೆಚ್ಚದಲ್ಲಿ ಕೆಆರ್‌ಐಡಿಎಲ್ ಶುದ್ಧ ನೀರಿನ ಘಟಕ ನಿರ್ಮಿಸಿದೆ. ಘಟಕದಲ್ಲಿ ಅಗತ್ಯ ಪರಿಕರ ಜೋಡಿಸಿದ್ದಾರೆ. ಆದರೆ ನೀರಿನ ವ್ಯವಸ್ಥೆಯನ್ನೇ ಮಾಡಿಲ್ಲ, ಹೀಗಾಗಿ ವರ್ಷದಿಂದ ಉಪಯೋಗಕ್ಕಿಲ್ಲವಾಗಿದೆ.
ಅಚ್ಚರಿ ಎನ್ನುವಂತೆ ಸಮರ್ಪಕ ನೀರಿನ ವ್ಯವಸ್ಥೆ ಮಾಡದೆ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಂದ ಆರೇಳು ತಿಂಗಳ ಹಿಂದಷ್ಟೆ ಉದ್ಘಾಟನೆ ಮಾಡಿಸಲಾಗಿತ್ತು. ಅದೂ ಟ್ಯಾಂಕರ್ ಮೂಲಕ ಸಿಂಟೆಕ್ಸ್‌ಗೆ ನೀರು ತುಂಬಿಸಿ ಉದ್ಘಾಟನೆಯ ದಿನ ನೀರು ಬರುವಂತೆ ಮಾಡಿ ಸಚಿವರನ್ನೇ ಯಾಮಾರಿಸಿ ಉದ್ಘಾಟಿಸಿದ್ದಾರೆ. ಇನ್ನೂ ವಿಶೇಷ ಎನ್ನುವಂತೆ ಜೆ.ಸಿ.ಮಾಧುಸ್ವಾಮಿ ಅವರಿಗೆ ಸಣ್ಣ ನೀರಾವರಿ ಬದಲಿಗೆ ಹಜ್ ಮತ್ತು ವಕ್ಫ್ ಖಾತೆ ಘೋಷಣೆಯಾದ ದಿನ ಘಟಕ ಉದ್ಘಾಟಿಸಲಾಗಿದೆ. ಸಚಿವರು ಉದ್ಘಾಟಿಸಿದ್ದರಿಂದ ಇನ್ಮುಂದೆ ನಿರಂತರವಾಗಿ ಶುದ್ಧ ನೀರು ಬರುತ್ತದೆಂದು ಉತ್ಸಾಹದಿಂದ ಮುಂಜಾನೆ ಕ್ಯಾನ್ ಹಿಡಿದು ಘಟಕದ ಬಳಿ ತೆರಳಿದವರಿಗೆ ನಿರಾಸೆಯಾಗಿದೆ.
ಈಗ ಸರಿಯಾಗಬಹುದು ಆಗ ಸರಿಯಾಗಬಹುದು ಎಂದು ನಿತ್ಯ ನೀರಿಗೆ ಅಲೆದು ಅಲೆದು ಅಂತಿಮವಾಗಿ ಈ ಘಟಕದಲ್ಲಿ ನೀರು ಬರಲ್ಲ. ಬಿಲ್ ಮಾಡಿಕೊಳ್ಳಲು ಗುತ್ತಿಗೆದಾರರು ಉದ್ಘಾಟನೆ ದಿನ ನೀರು ಬಿಟ್ಟಿದ್ದಾರೆ ಎಂದು ನಿರ್ಧರಿಸಿ ಅತ್ತ ತಲೆಯಾಕುವುದನ್ನೇ ಬಿಟ್ಟರು. ಅಲ್ಲದೆ ಎಂದಿನಂತೆ ಹಣ ಉಳ್ಳವರು ದುಪ್ಪಟ್ಟು ಹಣ ಕೊಟ್ಟು ಶುದ್ಧ ನೀರು ತಂದು ಕುಡಿದರೆ ಬಡವರಿಗೆ ಟ್ಯಾಂಕರ್ ನೀರೆ ಗತಿಯಾಗಿದೆ.
ನೀರಿನ ಸೌಲಭ್ಯ ಕಲ್ಪಿಸದೆ ಶುದ್ಧ ನೀರಿನ ಘಟಕ ನಿರ್ಮಾಣ ಮಾಡಿದ್ದಾರೆ. ಟ್ಯಾಂಕರ್ ಮೂಲಕ ನೀರು ಬಿಟ್ಟು ಸಚಿವರಿಂದ ಉದ್ಘಾಟಿಸಿದ್ದಾರೆ. ನಂತರ ಮೇಲಾಧಿಕಾರಿಗಳ ಭೇಟಿ ನೀಡುವ ವೇಳೆಗೆ ಮತ್ತೆ ಟ್ಯಾಂಕರ್ ಮೂಲಕ ನೀರು ಬಿಟ್ಟು ಅಧಿಕಾರಿಯ ಭೇಟಿಯ ೆಟೊ ತೆಗೆಯುತ್ತಾರೆ. ಉಳಿದಂತೆ ಇಲ್ಲಿನ ನಿವಾಸಿಗಳು ಒಂದೇ ಒಂದು ಚೊಂಬು ನೀರನ್ನು ಈ ಘಟಕದಿಂದ ಹಿಡಿದಿಲ್ಲ. ಎಚ್.ಆರ್.ರಹಮತ್‌ಉಲ್ಲಾ, ಸ್ಥಳೀಯ ನಿವಾಸಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಘಟಕಕ್ಕೆ ನೀರಿನ ಸೌಲಭ್ಯ ಇಲ್ಲದಿರುವ ವಿಷಯವನ್ನು ಗೌಪ್ಯವಾಗಿಟ್ಟು ಉದ್ಘಾಟಿಸಿಸಿದ್ದಾರೆ. ಈ ವಿಚಾರ ಸಚಿವರಿಗೆ ಮೊದಲೇ ಗೊತ್ತಿದ್ದರೆ ಯಾವುದೇ ಕಾರಣಕ್ಕೂ ಉದ್ಘಾಟನೆ ಮಾಡುತ್ತಿರಲಿಲ್ಲ. ಬದಲಾಗಿ ತಕ್ಷಣ ನೀರಿನ ಸೌಲಭ್ಯ ಕಲ್ಪಿಸಲು ಸೂಚನೆ ನೀಡುತ್ತಿದ್ದರು. ಸೈಯದ್ ಜಮೀರ್, ಸ್ಥಳೀಯ ನಿವಾಸಿ ಮಾರುತಿ ನಗರದ ಶುದ್ಧ ಕುಡಿಯುವ ನೀರಿನ ಘಟಕವನ್ನು ಹುಳಿಯಾರು ಪಂಚಾಯಿತಿಗೆ ಅಲ್ಪಸಂಖ್ಯಾತರ ಇಲಾಖೆಯಿಂದ ಹಸ್ತಾಂತರಿಸಿಲ್ಲ. ಎಸ್ಟಿಮೆಂಟ್‌ನಲ್ಲಿ ನೀರಿನ ಸೌಲಭ್ಯದ ಬಗ್ಗೆ ಏನಿದೆ ಎಂದು ಗೊತ್ತಿಲ್ಲ. ಅವರು ನಮಗೆ ಹಸ್ತಾಂತರ ಮಾಡಿದಾಗ ಎಸ್ಟಿಮೆಂಟ್ ನೋಡಿ ಅದರಲ್ಲಿ ನೀರಿನ ವ್ಯವಸ್ಥೆಗೆ ಹಣ ಮೀಸಲಿಡದಿದ್ದರೆ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ವಿಷಯ ಮಂಡಿಸಿ ನೀರಿನ ವ್ಯವಸ್ಥೆ ಕಲ್ಪಿಸುತ್ತೇವೆ. ಮಂಜುನಾಥ್, ಎಂಜಿನಿಯರ್, ಹುಳಿಯಾರು ಪಂಚಾಯ್ತಿ