ಕೊಳ್ಳೇಗಾಲ: ತಾಲೂಕಿನ ಹೊಂಡರಬಾಳು ಹೊರವಲಯದ ಬಿಆರ್‌ಟಿ ಅರಣ್ಯ ವ್ಯಾಪ್ತಿಗೆ ಬರುವ ಸಿದ್ದೇಶ್ವರ ಬೆಟ್ಟದ ಸಮೀಪದಲ್ಲಿ ಹುಲಿಯೊಂದು ಪ್ರತ್ಯಕ್ಷವಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಶನಿವಾರ ಸದ್ದು ಮಾಡಿದೆ.
ಸಿದ್ದೇಶ್ವರ ಬೆಟ್ಟಕ್ಕೆ ಇತ್ತೀಚೆಗೆ ಆಗಮಿಸಿದ ಪ್ರವಾಸಿಗರಿಬ್ಬರ ಮೊಬೈಲ್ ಪೋನ್ ಕ್ಯಾಮರಾ ಕಣ್ಣಿಗೆ ಹುಲಿ ಕಂಡಿದೆ ಎನ್ನಲಾಗಿದೆ.
ದೂರದಲ್ಲಿ ನಿಂತು ದೊಡ್ಡ ಕಲ್ಲು ಬಂಡೆಯ ಮೇಲೆ ಬೃಹತ್ ಗಾತ್ರದ ಹುಲಿಯೊಂದು ವಿರಮಿಸುತ್ತಿರುವ ದೃಶ್ಯ ಸೆರೆ ಹಿಡಿದಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೊಳ್ಳೇಗಾಲ ಭಾಗದ ಹಲವರು ತಮ್ಮ ವಾಟ್ಸಾಪ್ ಸ್ಟೇಟಸ್‌ಗಳಲ್ಲಿ ಈ ದೃಶ್ಯವನ್ನು ಹಾಕಿಕೊಂಡಿದ್ದಾರೆ. ಇದರಿಂದ ಬೆಟ್ಟದ ಸುತ್ತಮುತ್ತಲ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.