ಜಿಲ್ಲೆ

ಹುಲಿಗಿನಮುರಡಿ ಜಾತ್ರೆಗೆ ಸಿದ್ಧತೆ - ಸಂಕ್ರಾಂತಿಯಂದು ರಥೋತ್ಸವ

ಎ. ಆರ್. ರಘುರಾಮ

ಗುಂಡ್ಲುಪೇಟೆ : ಮಕರ ಸಂಕ್ರಾಂತಿಯಂದು ಹುಲಿಗಿನಮುರಡಿ ಶ್ರೀ ವೆಂಕಟರಮಣಸ್ವಾಮಿ ಬೆಟ್ಟದಲ್ಲಿ ನಡೆಯುವ ದೊಡ್ಡ ಜಾತ್ರೆಗೆ ಅಂತಿಮ ಹಂತದ ಸಿದ್ಧತೆಗಳು ನಡೆದಿವೆ. ಜಾತ್ರೆಯ ಅಂಗವಾಗಿ ಕಳೆದ 10 ದಿನಗಳಿಂದ ವಿವಿಧ ಧಾರ್ಮಿಕ ಕಾರ್ಯಗಳನ್ನು ನಡೆಸಲಾಗುತ್ತಿದೆ.ರಥಕ್ಕೆ ಬಣ್ಣಬಣ್ಣದ ವಸ್ತ್ರಗಳಿಂದ ಅಲಂಕರಿಸಿ ಸಿದ್ಧ ಪಡಿಸಲಾಗಿದೆ. ಸ್ವಾಮಿಯ ಮೂಲ ವಿಗ್ರಹಗಳು ಹಾಗೂ ಉತ್ಸವ ಮೂರ್ತಿಗಳಿಗೆ ಹಲವು ವರ್ಣದ ಪುಷ್ಪಗಳಿಂದ ಅಲಂಕರಿಸಿ ವಿಶೇಷ ಪೂಜೆಗಳನ್ನು ನಡೆಸಲಾಗುತ್ತಿದೆ. ಜ. 14ರಂದು ಮಧ್ಯಾಹ್ನ 12.30ಕ್ಕೆ ಸರಿಯಾಗಿ ಮುಜರಾಯಿ ಅಧಿಕಾರಿಯೂ ಆದ ತಹಸೀಲ್ದಾರ್ ಟಿ.ರಮೇಶ್‌ಬಾಬು ಅವರು ದಿವ್ಯ ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ಏಕಮುಖ ಸಂಚಾರ: ಸಂಕ್ರಾಂತಿಯಂದು ನಡೆಯುವ ಜಾತ್ರೆಗೆ ಸ್ಥಳೀಯರಲ್ಲದೆ ನೆರೆ ರಾಜ್ಯಗಳಿಂದಲೂ ಹೆಚ್ಚಿನ ಭಕ್ತರು ಆಗಮಿಸಲಿದ್ದಾರೆ. ಪ್ರತಿ ವರ್ಷವೂ ಈ ಸಂದರ್ಭ ನೂಕುನುಗ್ಗಲು ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಕ್ತರು ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಪೊಲೀಸ್ ಇಲಾಖೆ ಬಿಗಿ ಕ್ರಮ ಕೈಗೊಂಡಿದೆ. ಸುವ್ಯವಸ್ಥೆ ಪಾಲನೆಗೆ ಸರ್ಕಲ್ ಇನ್ಸ್‌ಪೆಕ್ಟರ್ ಹಾಗೂ ಸಬ್‌ಇನ್ಸ್‌ಪೆಕ್ಟರ್ ಸೇರಿದಂತೆ 100 ಸಿಬ್ಬಂದಿ ನಿಯೋಜಿಸಲಾಗಿದೆ.

ತೆರಕಣಾಂಬಿಯಿಂದ ಬೊಮ್ಮನಹಳ್ಳಿ ರಸ್ತೆಯಲ್ಲಿ ಬೆಟ್ಟಕ್ಕೆ ಹೋಗುವ ವಾಹನಗಳು ಕೊತ್ತಲವಾಡಿ ಮಾರ್ಗದ ಮೂಲಕ ಹಿಂದಿರುಗಿ ಬರುವಂತೆ ಮಾಡಲಾಗಿದೆ. ಪಟ್ಟಣ ಹಾಗೂ ತೆರಕಣಾಂಬಿಯಿಂದ ಬೆಟ್ಟಕ್ಕೆ ಹೋಗುವ ಜನರ ಅನುಕೂಲಕ್ಕೆ 15 ಸಾರಿಗೆ ಬಸ್ ನಿಯೋಜಿಸಲಾಗಿದೆ. ಬೆಟ್ಟಕ್ಕೆ ಹೋಗುವ ಭಕ್ತರು ತಮ್ಮ ವಾಹನಗಳನ್ನು ತಪ್ಪಲಿನಲ್ಲಿ ನಿಲ್ಲಿಸಲು ತೆರಕಣಾಂಬಿ ಪೊಲೀಸರು ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದಾರೆ.

ತಪ್ಪಲಿನಿಂದ ಭಕ್ತರು ಬೆಟ್ಟಕ್ಕೆ ಹೋಗಿಬರಲು 5 ಬಸ್ ನಿಯೋಜಿಸಲಾಗಿದೆ. ಕಿಸೆಗಳ್ಳರ ಹಾಗೂ ಸರಗಳ್ಳರ ಕೈಚಳಕ ತಡೆಗೆ ಸಿಸಿ ಕ್ಯಾಮರಾ ಅಳವಡಿಸಿ ಮಫ್ತಿಯಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಒಟ್ಟಾರೆ ಉತ್ಸವಕ್ಕೆ ಸಂಭ್ರಮದ ಸಿದ್ಧತೆ ಸಾಗಿದೆ.