ಜಿಲ್ಲೆ

ಸರ್ವರಿಗೂ ಸಮಾನ ಅವಕಾಶ ಸ್ಥಾನಮಾನ ನೀಡುವುದು ಸಂವಿಧಾನದ ಆಶಯ: ಸಚಿವ ಎಚ್.ಕೆ.ಪಾಟೀಲ

Gadag - Shivanand Hiremath

ಗದಗ: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ನೇತೃತ್ವದ ಸಮಿತಿಯು ರಚಿಸಿದ ಭಾರತದ ಸಂವಿಧಾನವು ಶ್ರೇಷ್ಠ ಸಂವಿಧಾನವಾಗಿದೆ. ಸರ್ವರಿಗೂ ಸಮಾನ ಅವಕಾಶ ಸ್ಥಾನಮಾನ ನೀಡುವುದು ಸಂವಿಧಾನದ  ಆಶಯ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಕೆ.ಎಚ್..ಪಾಟೀಲ ಪ್ರತಿಷ್ಟಾನ ಸಹಯೋಗದಲ್ಲಿ ಹುಲಕೋಟಿಯ ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಂಗಳವಾರ ಆಯೋಜಿಸಲಾದ ಮೂರು ದಿನಗಳ ಸಂಪನ್ಮೂಲ ವ್ಯಕ್ತಿಗಳಿಗೆ ಸಶಕ್ತೀಕರಣ ತರಬೇತಿ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಸಚಿವರು ಮಾತನಾಡಿದರು.
ಗದಗ ಜಿಲ್ಲೆಯ 2.24 ಲಕ್ಷ ಕುಟುಂಬಗಳಿಗೂ ಸಹ ಸಂವಿಧಾನ ಓದಿಸಬೇಕು ಎನ್ನುವ ಗುರಿ ಹೊಂದಲಾಗಿದೆ. ಅದರಂತೆ ಈಗಾಗಲೇ ಸಶಕ್ತೀಕರಣ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಗಿದೆ. ಉನ್ನತ ಅಧಿಕಾರ ಸ್ಥಾನಮಾನದಲ್ಲಿರುವವರು ಸಂವಿಧಾನವನ್ನು ಅಶಕ್ತೀಕರಣಗೊಳಿಸುವುದನ್ನು ಬಿಟ್ಟು ಸಶಕ್ತಿಕರಣಗೊಳಿಸುವೆಡೆಗೆ ಮುಂದಾಗಬೇಕು. ಅಧಿಕಾರದಲ್ಲಿರುವವರೆಲ್ಲರೂ ಸಂವಿಧಾನದ ಆಶಯ ಸಾಕಾರವಾಗಿದೆಯೇ ಎಂಬುದನ್ನು ಗಂಭಿರವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.  

ಸಮಾನ ಹಕ್ಕು, ಅವಕಾಶ ಸಂವಿಧಾನದಿಂದ ಸರ್ವರಿಗೂ ತಲುಪಬೇಕು. ಶೋಷಣೆಮುಕ್ತ ಸಮಾಜ ನಿರ್ಮಾಣವಾಗಬೇಕು. ಸಂವಿಧಾನದ ಮೂಲ ಆಶಯ ಸಾಕಾರಗೊಳ್ಳಬೇಕು. ಇದಕ್ಕಾಗಿ ಪ್ರತಿ ಸಾರ್ವಜನಿಕರಿಗೂ ಸಂವಿದಾನದ ಅರಿವು ಮೂಡಿಸಬೇಕಿದೆ ಎಂದು ನುಡಿದರು.

ಸಂವಿದಾನದ ಪೀಠಿಕೆಯಲ್ಲಿಯೇ ಉಲ್ಲೇಖಿಸಲಾದಂತಹ ಜಾತ್ಯಾತೀತ ಶಬ್ದದ ಅರ್ಥ ಸರ್ವರೂ ಅರಿಯಬೇಕು.  ದೇಶದ ಸಂಪತ್ತು ಒಬ್ಬರಲ್ಲಿ ಮಾತ್ರವೇ ಕ್ರೂಢೀಕರಣವಾಗಬಾರದು. ಇದು ಸರಿಯಾದ ಬೆಳವಣಿಗೆಯಲ್ಲ. ಸಂವಿಧಾನದ ಆಶಯದಂತೆ ಸರ್ವರಿಗೂ ಸಮಬಾಳು ಸಮಪಾಲು ಆಗಬೇಕಿದೆ ಎಂದು ಹೇಳಿದರು.
ಸರ್ಕಾರದ ಸೌಲಭ್ಯಗಳು ನೇರವಾಗಿ ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಈ ದಿಶೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಯಾದ ನಂತರ ಗ್ಯಾರಂಟಿ ಯೋಜನೆಗಳ ಸೌಲಭ್ಯವನ್ನು ನೇರವಾಗಿಯೇ ಅರ್ಹರ ಖಾತೆಗಳಿಗೆ ಅನುದಾನ ನೀಡುವ ಮೂಲಕ ಜಿಲ್ಲೆಯಲ್ಲಿ ಶೇ 99 ರಷ್ಟು ಗುರಿ ಸಾಧನೆಯಾಗಿದೆ. ಇದರಿಂದ ವಿನಾಕಾರಣ ಸರ್ಕಾರದ ಅನುದಾನ ಅಪವ್ಯಯವಾಗುವುದು ನಿಯಂತ್ರಣವಾಗಿದೆ. ಶಾಂತಿಯುತ ಹಾಗೂ ಭ್ರಾತೃತ್ವ ಭಾವನೆ ಭಾರತೀಯರಾದ ನಮ್ಮೆಲ್ಲರಿಗೂ ಬರಬೇಕು. ಈ ಮೂಲಕ  ಸಂವಿಧಾನದ ಸದಾಶಯ ಸಾಕಾರಗೊಳ್ಳಬೇಕು ಎಂದು ತಿಳಿಸಿದರು.

ವ್ಯಾಜ್ಯಮುಕ್ತ ಜಿಲ್ಲೆ:
ಗದಗ ಜಿಲ್ಲೆಯನ್ನು ವ್ಯಾಜ್ಯಮುಕ್ತ ಜಿಲ್ಲೆಯಾಗಿಸಬೇಕೆಂದು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಉನ್ನತ ಅಧಿಕಾರಿಗಳೊಂದಿಗೆ ಹಾಗೂ ಸಮಾಜದ ಪ್ರಮುಖರೊಂದಿಗೆ ಚರ್ಚಿಸಲಾಗಿದೆ. ಶೀಘ್ರವೇ ವ್ಯಾಜ್ಯಮುಕ್ತ ಜಿಲ್ಲೆಯಾಗಿಸುವ ಯೋಜನೆಯನ್ನು ಜಾರಿಗೊಳಿಸಲಾಗುವುದು. ಮೊದಲ ಹಂತದಲ್ಲಿ ನೂರು ಗ್ರಾಮಗಳನ್ನಾದರೂ ವ್ಯಾಜ್ಯಮುಕ್ತ  ಗ್ರಾಮಗಳನ್ನಾಗಿ ಮಾಡಬೇಕಿದೆ. ಗ್ರಾಮ ನ್ಯಾಯಾಲಯಗಳನ್ನು ರಚಿಸುವ ಮೂಲಕ ವ್ಯಾಜ್ಯ ಮುಕ್ತ ಗ್ರಾಮಗಳನ್ನು ಮಾಡಲಾಗುವುದು ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು,ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ನುಡಿದರು.

ನಿವೃತ್ತ ನ್ಯಾಯಮೂರ್ತಿ ನಾಗರಾಜ ಅರಳಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಂವಿಧಾನ ಸರಿಯಾದ ನಿಟ್ಟಿನಲ್ಲಿ ಸಾಗಬೇಕಾದರೆ ಮತದಾರ ಮೊದಲು ಜಾಗೃತನಾಗಬೇಕು. ಸಂವಿಧಾನ ಪಾಲನೆ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು ಹಾಗೂ ಸಂವಿಧಾನದ ಆಚರಣೆಯಲ್ಲಿ ಎಡವಬಾರದು ಎಂದರು.

ಸಂವಿಧಾನವನ್ನು  ಸರಿಯಾದ ರೀತಿಯಲ್ಲಿ ಅರ್ಥೈಸಿಕೊಳ್ಳಬೇಕು. ಸಂವಿಧಾನವನ್ನು ಗೌರವಿಸುವ ಮನೋಭಾವನೆ ನಮ್ಮದಾಗಿಸಿಕೊಳ್ಳಬೇಕು. ಭಾರತದ ಸಂವಿದಾನ ವಿಶ್ವದಲ್ಲೇ ಶ್ರೇಷ್ಠ ಸಂವಿಧಾನವಾಗಿದೆ ಎಂಬುದನ್ನು ನಾವೆಲ್ಲರೂ ತಿಳಿದು ಸಂವಿದಾನದ ಆಶಯಗಳನ್ನು ಜಾರಿಗೊಳಿಸುವ ಸಂಕಲ್ಪ ಮಾಡೋಣ ಎಂದು ಹೇಳಿದರು.

ರಾಜ್ಯ ವಿಕೇಂದ್ರೀಕರಣ ಅಭಿವೃದ್ಧಿ ಸಮಿತಿ ಸದಸ್ಯರಾದ ಪ್ರಮೋದ ಹೆಗಡೆ ಮಾತನಾಡಿ  ಹಳ್ಳಿಗಳಲ್ಲಿಯ ಯುವಕರು ನಗರದೆಡೆ ವಲಸೆ ಹೋದರೆ ಹಳ್ಳಿಗಳ ಸಶಕ್ತೀಕರಣ ಸಾಧ್ಯವೇ ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕು. ನಗರದಲ್ಲಿ ಮೂಲಭೂತ ಸೌಕರ್ಯ, ಸೌಲಭ್ಯ ಕೇಂದ್ರೀಕೃತವಾಗುತ್ತಿದೆ. ಇದು ಹಳ್ಳಿಗಳಿಗೂ ತಲುಪಬೇಕು ಎಂದರು.

ಗ್ರಾಮಗಳಲ್ಲಿ ಜರುಗುವ ಸಭೆಗಳು ಸರ್ವಶಕ್ತವಾಗಿ ನಡೆಯಬೇಕು ಹಾಗೂ ಅಲ್ಲಿನ ತೀರ್ಮಾನಗಳು ಸರಿಯಾಗಿ ಅನುಷ್ಟಾನವಾಗುವ ಮೂಲಕ ಹಳ್ಳಿಗಳ ಸಶಕ್ತೀಕರಣ ಸಾದ್ಯ ಎಂದರು. ಹಳ್ಳಿಗಳು ಉಳಿದರೆ ಭಾರತ ಉಳಿಯಲಿದೆ ಗ್ರಾಮ ಆಡಳಿತ ವ್ಯವಸ್ಥೆ ಸರಿಯಾಗಿ ಆಗಬೇಕು ಎಂದರು.  

ರಾಮಕೃಷ್ಣಾಶ್ರಮದ ನಿರ್ಭಯಾನಂದ ಸರಸ್ವತಿ ಶ್ರೀಗಳು ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಕಾರ್ಯಕ್ರಮದ ವೇದಿಕೆಯಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿಷ್ಣುಕಾಂತ ಚಟಪಲ್ಲಿ, ನಿವೃತ್ತ ನ್ಯಾಯಾಧೀಶ ಜಿ.ಎಸ್.ಪಲ್ಲೇದ, ಮಾಜಿ ಶಾಸಕರಾದ ಬಿ.ಆರ್.ಯಾವಗಲ್, ಡಿ.ಆರ್.ಪಾಟೀಲ, ಪ್ರಮುಖರಾದ ವಾಸಣ್ಣಕುರಡಗಿ, ಗುರಣ್ಣ ಬಳಗಾನೂರ, ಸಿದ್ದು ಪಾಟೀಲ, ಉಮೇಶಗೌಡ ಪಾಟೀಲ, ಪ್ರಾಣೇಶ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಜಿ.ಕೆ.ಜಮಾದಾರ ಕಾರ್ಯಕ್ರಮ ನಿರ್ವಹಿಸಿದರು.