ಹುಕ್ಕೇರಿ ಪಟ್ಟಣದ ಈಶ್ವರಲಿಂಗ ದೇವಸ್ಥಾನದ ಜೀರ್ಣೋದ್ಧಾರಕ್ಕೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಚಾಲನೆ ನೀಡಿದರು. ಶಾಸಕ ಉಮೇಶ ಕತ್ತಿ, ಜಯಗೌಡ ಪಾಟೀಲ, ಪಿ.ಆರ್. ಮುತಾಲಿಕ, ಗುರುರಾಜ ಕುಲಕರ್ಣಿ, ರಾಜು ಮುನ್ನೋಳಿ, ಪುರಸಭೆ ಸದಸ್ಯರು, ಅಧಿಕಾರಿಗಳಿದ್ದರು. 
ಜಿಲ್ಲೆ

ಹುಕ್ಕೇರಿ ಅಭಿವೃದ್ಧಿಗೊಳಿಸಿದ ಕತ್ತಿ

ಹುಕ್ಕೇರಿ: ಶಾಸಕ ಉಮೇಶ ಕತ್ತಿ ನಾಡಿನ ಹಿರಿಯ ರಾಜಕಾರಣಿ ಹಾಗೂ ವಿಧಾನಸಭೆಗೆ ಅತಿ ಹೆಚ್ಚು ಬಾರಿ ಆಯ್ಕೆಯಾಗಿರುವ ಅನುಭವಿ. ಬಿಜೆಪಿಯ ರಾಜ್ಯ ಮತ್ತು ಕೇಂದ್ರ ನಾಯಕರು ಅವರನ್ನು ಶೀಘ್ರ ಸಚಿವರನ್ನಾಗಿ ಮಾಡುವ ಮೂಲಕ ಜನಸೇವೆಗೆ ನಿಯುಕ್ತಿಗೊಳಿಸಲಿದ್ದಾರೆಂಬ ವಿಶ್ವಾಸವಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬುಧವಾರ ಪಟ್ಟಣದ ಹಳೇ ತಹಸೀಲ್ದಾರ್ ಕಾರ್ಯಾಲಯದ ಆವರಣದಲ್ಲಿರುವ ಈಶ್ವರಲಿಂಗ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಬಲವರ್ಧನೆಗೆ ಶ್ರಮಿಸಿದ ಹಿರಿಯ ನಾಯಕರಲ್ಲಿ ಶಾಸಕ ಉಮೇಶ ಕತ್ತಿ ಅವರೂ ಒಬ್ಬರು. ಪ್ರಸ್ತುತ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹೆಚ್ಚಿನ ಅನುದಾನ ಬಳಕೆ, ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳ ಮೂಲಕ ಜನಮೆಚ್ಚಿದ ಶಾಸಕರೆಂದು ಉಮೇಶ ಕತ್ತಿ ಹೆಸರು ಪಡೆದಿದ್ದಾರೆ ಎಂದರು. ಬಿಜೆಪಿಯಲ್ಲಿ ಅಸಮಾಧಾನ ಮತ್ತು ಭಿನ್ನಮತದ ಮಾತು ಕೇಳಿ ಬರುತ್ತಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಕಡಾಡಿ, ಜಿಲ್ಲೆಯ ಸಚಿವರು ತಮ್ಮ ಖಾತೆಗೆ ಹೆಚ್ಚಿನ ಅನುದಾನ ತರುವ ನಿಟ್ಟಿನಲ್ಲಿ ಹಾಗೂ ಕೇಂದ್ರ ಸರ್ಕಾರದ ಸಹಕಾರಕ್ಕೆ ದೆಹಲಿಗೆ ಭೇಟಿ ನೀಡಿದ್ದಾರೆ. ಅದನ್ನು ತಪ್ಪಾಗಿ ಅರ್ಥೈಸಿಕೊಳ್ಳಬಾರದೆಂದು ಸ್ಪಷ್ಟಪಡಿಸಿದರು. ಈಶ್ವರಲಿಂಗ ದೇವಸ್ಥಾನ ಪರವಾಗಿ ಮಲ್ಲಪ್ಪ ಬಿಸಿರೊಟ್ಟಿ, ಚೇತನ ಹೊಳೆಪ್ಪಗೊಳ, ಸಚಿನ ಖೋತ ಅವರು ಶಾಸಕ ಉಮೇಶ ಕತ್ತಿ ಮತ್ತು ಈರಣ್ಣ ಕಡಾಡಿ ಅವರನ್ನು ಸನ್ಮಾನಿಸಿದರು. ಜಯಗೌಡ ಪಾಟೀಲ, ಪಿ.ಆರ್. ಮುತಾಲಿಕ, ಮಹಾವೀರ ನಿಲಜಗಿ, ಅಶೋಕ ಪಾಟೀಲ, ರೋಹಿತ ಚೌಗಲಾ ಮತ್ತಿತರರಿದ್ದರು.

ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸ್ವಾಮೀಜಿಗಳಿಂದ ಪೂಜೆ

ಶಾಸಕ ಉಮೇಶ ಕತ್ತಿ ಮಾತನಾಡಿ, ರಾಜ್ಯಸಭೆಯ ನೂತನ ಸದಸ್ಯರಾದ ಬಳಿಕ ಮೊದಲ ಬಾರಿಗೆ ಹುಕ್ಕೇರಿ ಮತಕ್ಷೇತ್ರಕ್ಕೆ ಆಗಮಿಸಿರುವ ಕಡಾಡಿ ಅವರು ಕ್ರಿಯಾಶೀಲ ವ್ಯಕ್ತಿ. ಇವರ ಅವಧಿಯಲ್ಲಿ ಜಿಲ್ಲೆ ಹಾಗೂ ನಾಡಿನ ಜನತೆಗೆ ಹೆಚ್ಚು ಅನುಕೂಲವಾಗಲಿದೆ ಎಂದರು. ನಿಡಸೋಸಿಯ ಜಗದ್ಗುರು ಪಂಚಮ ಶಿವಲಿಂಗೇಶ್ವರ ಶ್ರೀ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು, ವಿರಕ್ತಮಠದ ಶಿವಬಸವ ಶ್ರೀ, ಕ್ಯಾರಗುಡ್ಡ ಆವಜೀಕರ ಆಶ್ರಮದ ಅಭಿನವ ಮಂಜುನಾಥ ಶ್ರೀಗಳು ಈಶ್ವರಲಿಂಗ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಪೂಜೆ ನೆರವೇರಿಸಿದರು.