ಜಿಲ್ಲೆ

ಭತ್ತದ ಗದ್ದೆಯಲ್ಲಿ ಕಾಣಿಸಿಕೊಂಡ ಭಾರೀ ಗಾತ್ರದ ಹೆಬ್ಬಾವು

ಗಂಗಾಧರ ಬಿ ವಿ

ರಾಮನಗರ: ಬತ್ತದ ಗದ್ದೆಯಲ್ಲಿ ಸೇರಿಕೊಂಡಿದ್ದ ಭಾರೀ ಗಾತ್ರದ ಹೆಬ್ಬಾವೊಂದನ್ನು ಉರಗ ತಜ್ಞರ ಮೂಲಕ ರಕ್ಷಿಸಿ, ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿರುವ ಘಟನೆ ತಾಲೂಕಿನ ಪಾಲಾಭೋವಿದೊಡ್ಡಿಯಲ್ಲಿ ಗುರುವಾರ ನಡೆದಿದೆ.

ಗ್ರಾಮದ ಅರ್ಕಾವತಿ ನದಿಯ ದಂಡೆ ಬಳಿ ಇರುವ ಚಂದ್ರೇಗೌಡ ಎಂಬುವರ ಗದ್ದೆಯಲ್ಲಿ ಬೆಳಿಗ್ಗೆ ಕಾರ್ಮಿಕರು ಭತ್ತದ ಪೈರು ಕೊಯ್ಲು ಮಾಡುವಾಗ ಪೈರುಗಳ ಮಧ್ಯೆ ಮಲಗಿದ್ದ ಹೆಬ್ಬಾವು ಗಮನಿಸಿದ್ದಾರೆ. ನಂತರ ಮಾಲೀಕರ ಗಮನಕ್ಕೆ ತಂದಿದ್ದಾರೆ.

ಸ್ಥಳಕ್ಕೆ ಬಂದ ಚಂದ್ರೇಗೌಡ ಅವರು, ವಲಯ ಅರಣ್ಯಾಧಿಕಾರಿ (ಆರ್‌ಎಫ್‌ಎ) ಮೊಹಮ್ಮದ್ ಮನ್ಸೂರ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಮನ್ಸೂರ್ ಅವರು ಅರಣ್ಯ ಇಲಾಖೆ ಸಿಬ್ಬಂದಿ ವರದರಾಜು ಜೊತೆಗೆ ಸ್ಥಳೀಯ ಉರಗ ರಕ್ಷಕ ಸ್ನೇಕ್ ಹರೀಶ್ ಅವರನ್ನು ಸ್ಥಳಕ್ಕೆ ಕಳಿಸಿದ್ದಾರೆ. ಪೈರುಗಳ ಮಧ್ಯೆ ಇದ್ದ ಹೆಬ್ಬಾವನ್ನು ಹರೀಶ್ ಅವರು ಹಿಡಿದರು.

ಗದ್ದೆಯಲ್ಲಿ ಹೆಬ್ಬಾವು ಇರುವ ವಿಷಯ ಗೊತ್ತಾಗುತ್ತಿದ್ದಂತೆ ಸ್ಥಳೀಯರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳಕ್ಕೆ ಬಂದು ಹೆಬ್ಬಾವನ್ನು ಕಣ್ತುಂಬಿಕೊಂಡರು. ಹರೀಶ್ ಅವರು ನಾಜೂಕಾಗಿ ಅದನ್ನು ಹಿಡಿದು ಚೀಲಕ್ಕೆ ತುಂಬಿಸಿ ಬೈಕ್‌ನಲ್ಲಿ ಕಾಡಿಗೆ ತೆಗೆದುಕೊಂಡು ಹೋಗುವ ದೃಶ್ಯವನ್ನು ಜನ ಕುತೂಹಲದಿಂದ ನೋಡುತ್ತಿದ್ದರು.

ಹೆಬ್ಬಾವು ಪತ್ತೆಯಾದ ಗದ್ದೆಯು ನದಿ ಪಕ್ಕದಲ್ಲೇ ಇದೆ. ಅನತಿ ದೂರದಲ್ಲೇ ರಾಮದೇವರ ಬೆಟ್ಟದ ಅರಣ್ಯವಿದೆ. ಹೆಬ್ಬಾವು ರಾತ್ರಿ ಆಹಾರ ಅರಸಿ ಕಾಡಿನಿಂದ ನದಿ ಹಾಗೂ ರಸ್ತೆ ದಾಟಿಕೊಂಡು ಬಂದಿರುವ ಸಾಧ್ಯತೆ ಇದ್ದು, ಗದ್ದೆಯಲ್ಲಿ ಬೀಡು ಬಿಟ್ಟಿದೆ. ಪೈರುಗಳ ಮಧ್ಯೆ ಇದ್ದ ಹೆಬ್ಬಾವನ್ನು ಕಾರ್ಮಿಕರು ಕೆಣಕದೆ ಅರಣ್ಯ ಇಲಾಕೆಗೆ ಮಾಹಿತಿ ನೀಡಿದ್ದಾರೆ.

ಇದರಿಂದಾಗಿ ಹೆಬ್ಬಾವನ್ನು ಸ್ನೇಕ್ ಹರೀಶ್ ಅವರಿಂದ ಸುರಕ್ಷಿತವಾಗಿ ಹಿಡಿಸಿ ಮರಳಿ ರಾಮದೇವರ ಬೆಟ್ಟದ ಕಾಡಿಗೆ ಬಿಡಲಾಯಿತು ಎಂದು ಆರ್‌ಎಫ್‌ಒ ಮೊಹಮ್ಮದ್ ಮನ್ಸೂರ್ ಮಾಹಿತಿ ನೀಡಿದರು.