ಬೆಂಗಳೂರು: ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಹಿರೇಕೋಡಿ ನಂದಿ ಪರ್ವತ ಆಶ್ರಮದ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜ ಅವರ ಹತ್ಯೆ ಖಂಡಿಸಿ ರಾಜ್ಯಾದ್ಯಂತ ಜೈನ ಸಮುದಾಯದವರು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಕಾಮಕುಮಾರ ನಂದಿ ಮಹಾರಾಜರನ್ನು ಹತ್ಯೆ ಮಾಡಿದ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಜೈನ ಸಮಾಜದ ಮುಖಂಡರು ಆಗ್ರಹಿಸಿದ್ದಾರೆ. ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಖಂಡಿಸಿ ಬೆಳಗಾವಿ, ಹಾವೇರಿ, ಧಾರವಾಡ ಸೇರಿದಂತೆ ರಾಜ್ಯಾದ್ಯಂತ ಜೈನ ಸಮಾಜದವರು ಬೃಹತ್ ಸಂಖ್ಯೆಯಲ್ಲಿ ಜಮಾಯಿಸಿ ಮೌನ ಪ್ರತಿಭಟನೆ ನಡೆಸಿದ್ದಾರೆ.
ನಂದಿ ಮಹಾರಾಜರು ಅಧಿಕಾರ ವಹಿಸಿಕೊಂಡ ಅಲ್ಫಾವಧಿಯಲ್ಲೇ ಆಶ್ರಮವನ್ನು ಉತ್ತಮವಾಗಿ ಬೆಳೆಸಿದ್ದಾರೆ. ಇನ್ನಷ್ಟು ಬೆಳೆಸಬೇಕೆಂಬ ಮಹಾದಾಸೆ ಹೊಂದಿದ್ದರು. ಅಹಿಂಸಾ ಮಾರ್ಗವನ್ನು ಪಾಲಿಸುವ ಜೈನ ಮುನಿಗಳನ್ನು ಬರ್ಬರವಾಗಿ ಹತ್ಯೆ ಮಾಡಿರುವುದು ಖಂಡನೀಯ. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ನಡೆಯದಂತೆ ಎಚ್ಚರವಹಿಸಬೇಕು. ಹತ್ಯೆ ಮಾಡಿದವರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಪ್ರತಿಭಟನಾ ನಿರತರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.