ಹಾಸನ: ಹಾಸನಾಂಬೆ ದರ್ಶನದ 11ನೇ ದಿನವಾದ ಸೋಮವಾರ ಅಪಾರ ಸಂಖ್ಯೆಯ ಭಕ್ತರು ಆಗಮಿಸಿ, ದೇವಿಯ ದರ್ಶನ ಪಡೆದರು.
ಮೂರು ದಿನ ಸರ್ಕಾರಿ ರಜೆ ಇರುವ ಹಿನ್ನೆಲೆಯಲ್ಲಿ ವಿವಿಧೆಡೆಗಳಿಂದ ಭಕ್ತರು ಬರುವುದು ಹೆಚ್ಚಾಗಿದೆ. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ವಿಪಕ್ಷ ನಾಯಕ ಆರ್. ಅಶೋಕ್, ಮೈಸೂರಿನ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ, ನಟ ವಿಜಯ ರಾಘವೇಂದ್ರ ಮೊದಲಾದವರು ಕುಟುಂಬ ಸಮೇತ ಆಗಮಿಸಿ ದೇವಿಯ ದರ್ಶನ ಪಡೆದರು.
ದರ್ಶನ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ, ಸೋಮವಾರ ಬೆಳಗ್ಗೆಯೂ ಹಾಸನಾಂಬೆ ದರ್ಶನ ಸುಗಮವಾಗಿ ನಡೆದಿದೆ. ಪೂಜಾ ಕಾರ್ಯಕ್ರಮದ ಕಾರಣ ಸೋಮವಾರ ಹಾಗೂ ಮಂಗಳವಾರ ಮಧ್ಯಾಹ್ನ 2 ರಿಂದ 3.30 ಗಂಟೆ ನಡುವೆ ದರ್ಶನಕ್ಕೆ ಅವಕಾಶ ಇರುವುದಿಲ್ಲ ಎಂದರು.
ಮಂಗಳವಾರ ದೀಪಾವಳಿ ವಿಶೇಷ ಪೂಜೆ ಕಾರಣಕ್ಕೆ ರಾತ್ರಿ 9 ಕ್ಕೆ ಸಾರ್ವಜನಿಕ ದರ್ಶನದ ಬಾಗಿಲುಗಳನ್ನು ಮುಚ್ಚಲಾಗುತ್ತದೆ. ಬುಧವಾರ ಬೆಳಗಿನ ಜಾವ 5.30ಕ್ಕೆ ಪೂಜೆ ಮುಗಿಸಿ ಮತ್ತೆ ದರ್ಶನ ಆರಂಭವಾಗುತ್ತದೆ. ಕೊನೆಯ ದಿನವಾದ ಬುಧವಾರ ಸಂಜೆ 7 ಗಂಟೆಯವರೆಗೆ ಮಾತ್ರ ದರ್ಶನಕ್ಕೆ ಅವಕಾಶವಿರುತ್ತದೆ. ಅದೇ ದಿನ ಸಂಜೆ ಸಿದ್ದೇಶ್ವರ ಸ್ವಾಮಿಯ ಜಾತ್ರೆ ಜರುಗಲಿದೆ ಎಂದರು.
ಗುರುವಾರ ಮಧ್ಯಾಹ್ನ ಶಾಸ್ತ್ರದ ಪ್ರಕಾರ ಪೂಜೆ ನೆರವೇರಿಸಿ ಮುಂದಿನ ವರ್ಷದವರೆಗೆ ದೇವಾಲಯದ ಬಾಗಿಲನ್ನು ಮುಚ್ಚಲಾಗುತ್ತದೆ. ಆದರೆ ಈ ದಿನ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಇರುವುದಿಲ್ಲ ಎಂದು ವಿವರಿಸಿದ್ದಾರೆ. ಭಕ್ತರು ಈ ಸಮಯಕ್ಕೆ ಅನುಗುಣವಾಗಿ ತಮ್ಮ ದೇವಾಲಯದ ಭೇಟಿಯನ್ನು ಯೋಜಿಸಿಕೊಳ್ಳಬೇಕಾಗಿ ವಿನಂತಿಸಿದರು.