ಜಿಲ್ಲೆ

ಭಾರತ್ ಅಕ್ಕಿಗೆ ಮೈಸೂರಿನಲ್ಲಿ ಭರ್ಜರಿ ಬೇಡಿಕೆ

ಆರ್.ಕೃಷ್ಣ

ಮೈಸೂರು: ಎಲ್ಲರಿಗೂ ಸುಲಭವಾಗಿ ದೊರೆಯಬೇಕು ಎನ್ನುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯಿಂದ ಬಿಡುಗಡೆಗೊಳಿಸಿರುವ ಭಾರತ್ ಅಕ್ಕಿಗೆ ನಗರದಲ್ಲಿ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ.
ಆರ್ಥಿಕವಾಗಿ ದುರ್ಬಲವಾಗಿರುವವರಿಗೆ ಮತ್ತಷ್ಟು ನೆರವು ನೀಡುವ ನಿಟ್ಟಿನಲ್ಲಿ ಒಂದೇ ಬ್ರ್ಯಾಂಡ್‌ನಡಿ ಅಗತ್ಯ ಆಹಾರ ಸಾಮಗ್ರಿಗಳನ್ನು ರಿಯಾಯಿತಿ ದರದಲ್ಲಿ ನೀಡುವ ಈ ಯೋಜನೆಗೆ ನಗರದ ವಿವಿಧ ಭಾಗಗಳಲ್ಲಿ ಮಂಗಳವಾರವೂ ಚಾಲನೆ ನೀಡಲಾಯಿತು.
ಕೆಜಿಗೆ 29 ರೂ.ಗೆ ದೊರೆಯುವ ಭಾರತ್ ಅಕ್ಕಿಯನ್ನು ನಗರದ ಹೆಬ್ಬಾಳಿನ ಕಾವೇರಿ ವೃತ್ತ ಮತ್ತು ಎನ್.ಆರ್.ಮೊಹಲ್ಲಾದ ಮಾರುತಿ ಸರ್ಕಲ್‌ನಲ್ಲಿ ಸಂಸದ ಪ್ರತಾಪ ಸಿಂಹ, ಬಿಜೆಪಿ ನಗರ ಘಟಕದ ಅಧ್ಯಕ್ಷ ಎಲ್.ನಾಗೇಂದ್ರ ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ವಿತರಿಸಿದರು. ಕಾವೇರಿ ವೃತ್ತದಲ್ಲಿ 10 ಕೆಜಿಯ 300 ಬ್ಯಾಗ್‌ಗಳನ್ನು ವಿತರಣೆ ಮಾಡಿದರೆ, ಮಾರುತಿ ಸರ್ಕಲ್‌ನಲ್ಲಿ 300 ಬ್ಯಾಗ್‌ಗಳನ್ನು ವಿತರಿಸಲಾಯಿತು.
ಭಾರತ್ ಅಕ್ಕಿಯನ್ನು ಪಡೆಯಲು ನಿರೀಕ್ಷೆಗೂ ಮೀರಿ ಜನರು ಬಂದಿದ್ದರಿಂದ ನೂಕುನುಗ್ಗಲು ಉಂಟಾಯಿತು. ಅರ್ಧ ಗಂಟೆಯೊಳಗೆ ಟ್ರಕ್‌ನಲ್ಲಿದ್ದ ತಂದಿದ್ದ 300 ಬ್ಯಾಗ್‌ಗಳು ಖಾಲಿಯಾದವು.
ಹೆಬ್ಬಾಳಿನ ಕಾವೇರಿ ಸರ್ಕಲ್‌ನಲ್ಲಿ ಭಾರತ್ ಅಕ್ಕಿ ನೀಡುವ ಕಾರ್ಯಕ್ಕೆ ಚಾಲನೆ ನೀಡಿದ ಸಂಸದ ಪ್ರತಾಪ ಸಿಂಹ ಮಾತನಾಡಿ, ಮಧ್ಯಮ ವರ್ಗದ ಜನರಿಗೆ ಕಡಿಮೆ ಬೆಲೆಯಲ್ಲಿ ಅಕ್ಕಿ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಭಾರತ್ ಅಕ್ಕಿಯನ್ನು ನೀಡುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲೆಡೆ ನಿರಂತರವಾಗಿ ಭಾರತ್ ಅಕ್ಕಿ ಮಾರಾಟವಾಗಲಿದೆ ಎಂದು ಹೇಳಿದರು.
ಇಂತಹ ಜನಪರ ಕಾರ್ಯಕ್ರಮಗಳನ್ನು ಮೋದಿ ನೇತೃತ್ವದ ಸರಕಾರ ಮಾಡುತ್ತಿದ್ದು, ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು. ಭಾರತ್ ಅಕ್ಕಿ ದುರುಪಯೋಗ ಆಗದಂತೆ ಮೊಬೈಲ್ ಸಂಖ್ಯೆ ಪಡೆದು ಒಬ್ಬರಿಗೆ ಒಂದೇ ಬ್ಯಾಗ್ ನೀಡಲಾಗುವುದು ಎಂದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಎಲ್.ನಾಗೇಂದ್ರ ಮಾತನಾಡಿ, ಎಲ್ಲರಿಗೂ ಸುಲಭವಾಗಿ ಅಕ್ಕಿ ದೊರೆಯಬೇಕು. ಈ ಮೂಲಕ ಬೆಲೆ ಏರಿಕೆ, ಕಾಳಸಂತೆಕೋರರಿಗೆ ಬಿಸಿ ಮುಟ್ಟಿಸಲು ಕೇಂದ್ರ ಸರ್ಕಾರ ಮಂದಾಗಿದೆ. ಇದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವ ಪಿಯೂಷ್ ಗೋಯಲ್ ಸೇರಿದಂತೆ ನಾಯಕರನ್ನು ಅಭಿನಂದಿಸುವುದಾಗಿ ತಿಳಿಸಿದರು.
ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕಿರಣ್‌ಗೌಡ, ಮುಖಂಡರಾದ ಸೋಮಶೇಖರ್ ಮತ್ತಿತರರಿದ್ದರು.