ವಿಜಯಪುರ: ಬಿಜೆಪಿಯ ಸುಳ್ಳು ಆರೋಪಗಳು, ಕೋಮುಗಲಭೆಗೆ ಪ್ರಚೋದನೆ, ದ್ವೇಷ ರಾಜಕಾರಣಕ್ಕೆ ಉತ್ತರವೆಂಬಂತೆ ಎರಡು ವರ್ಷಗಳ ಕಾಲ ಯಶಸ್ವಿಯಾಗಿ ಆಡಳಿತ ನಡೆಸಿದ ರಾಜ್ಯ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಬಿಂಬಿಸುವ ನಿಟ್ಟಿನಲ್ಲಿ ವಿಜಯನಗರದ ಹೊಸಪೇಟೆಯಲ್ಲಿ ಮೇ 20 ರಂದು ಬೆಳಗ್ಗೆ 11ಕ್ಕೆ ಹಮ್ಮಿಕೊಂಡಿರುವ ಬೃಹತ್ ಸಮಾವೇಶಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ ತಿಳಿಸಿದರು.
ಅಂದು ರಾಜ್ಯದ ನಾನಾ ಭಾಗಗಳಿಂದ ಎರಡೂವರೆ ಲಕ್ಷಕ್ಕೂ ಅಧಿಕ ಜನ ಭಾಗವಹಿಸಲಿದ್ದು, ಸುಮಾರು 1 ಲಕ್ಷ ಜನರಿಗೆ ವಸತಿ ಯೋಜನೆಯ ಹಕ್ಕುಪತ್ರ ನೀಡಲಾಗುತ್ತಿದೆ. ಗ್ಯಾರಂಟಿ ಯೋಜನೆಗಳಿಂದಾಗಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ ಎಂಬ ಬಿಜೆಪಿಗರ ಸುಳ್ಳು ಆರೋಪಕ್ಕೆ ಈ ಸಮಾವೇಶ ಉತ್ತರ ನೀಡಲಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ವಿಧಾನ ಸಭೆ ಚುನಾವಣೆ ಪೂರ್ವ ನೀಡಿದ ಪಂಚ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಸುಮಾರು ಒಂದು ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ತಲುಪುತ್ತಿದೆ. ಸುಮಾರು 90 ಸಾವಿರ ಕೋಟಿ ರೂಪಾಯಿ ಅನುದಾನವನ್ನು ಈವರೆಗೆ ಖರ್ಚು ಮಾಡಲಾಗಿದೆ ಎಂದರು.
ಈ ಮಧ್ಯೆ ಕೇಂದ್ರ ಬಿಜೆಪಿ ಸರ್ಕಾರ ರಾಜ್ಯಕ್ಕೆ ನೀಡಬೇಕಾದ ಜಿಎಸ್‌ಟಿ ಹಣ ನೀಡುತ್ತಿಲ್ಲ. ಅನ್ನಭಾಗ್ಯ ಯೋಜನೆಗೆ ಅಕ್ಕಿಯೂ ನೀಡದೇ ಅನ್ಯಾಯ ಮಾಡಿತು. ಕೇಂದ್ರ ಮತ್ತು ರಾಜ್ಯದ ಸಹಭಾಗಿತ್ವದ ಯೋಜನೆಗಳಿಗೆ ಹಣ ನೀಡುವಲ್ಲಿ ಮೀನಮೇಷ ಎಣಿಸುತ್ತಿದೆ. ಇಷ್ಟೆಲ್ಲ ಅಸಹಕಾರದ ನಡುವೆಯೂ ರಾಜ್ಯ ಸರ್ಕಾರ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ಬಗ್ಗೆ ಜನರಿಗೆ ಮನದಟ್ಟು ಮಾಡಿಕೊಡಲಾಗುವುದೆಂದರು.
ಬಿಜೆಪಿ ಕೇವಲ ಕೋಮುಗಲಭೆಗೆ ಪ್ರಚೋದನೆ ನೀಡುವಲ್ಲಿಯೇ ತಲ್ಲೀನವಾಗಿದೆ. ಕಾಂಗ್ರೆಸ್ ಕೋಮುಗಲಭೆ ನಿಯಂತ್ರಿಸುವಲ್ಲಿ ಸಾಕಷ್ಟು ಸಫಲವಾಗಿದೆ. ರಾಜ್ಯದ ನೀರಾವರಿ, ಕೈಗಾರಿಕೆ ಮತ್ತಿತರ ಕ್ಷೇತ್ರಗಳ ಅಭಿವೃದ್ಧಿಗೂ ಸರ್ಕಾರ ಶ್ರಮಿಸುತ್ತಿದೆ ಎಂದರು.
ಮುಖಂಡ ವೈಜನಾಥ ಕರ್ಪೂರಮಠ ಮಾತನಾಡಿ, ಕಾಂಗ್ರೆಸ್ ನುಡಿದಂತೆ ನಡೆದಿದೆ. ಸಣ್ಣ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿದೆ. ಕೇಂದ್ರ ಸರ್ಕಾರದಿಂದ ಬರಬೇಕಾದ ಅನುದಾನ ಸಹ ಕೋರ್ಟ್ ಮೊರೆ ಹೋಗಿ ತರಬೇಕಾದ ಅನಿವಾರ್ಯತೆ ಸೃಷ್ಠಿಯಾಗಿದೆ ಎಂದರು.
ವಸಂತ ಹೊನಮೋಡೆ ಇದ್ದರು.