ಚಿಕ್ಕ ಅಂಕನಹಳ್ಳಿ ಗ್ರಾಮದಲ್ಲಿರುವ ಪುರಾಣ ಪ್ರಸಿದ್ಧ ಶ್ರೀ ನಂದಿ ಬಸವೇಶ್ವರಸ್ವಾಮಿ ಬೃಹತ್ ದನಗಳ ಜಾತ್ರೆಯಲ್ಲಿ ದನಗಳನ್ನು ಕಟ್ಟಿರುವುದು.  
ಜಿಲ್ಲೆ

ಗಮನ ಸೆಳೆಯುತ್ತಿದೆ ಬೃಹತ್ ದನಗಳ ಜಾತ್ರೆ

ಮದ್ದೂರು: ತಾಲೂಕಿನ ಆತಗೂರು ಹೋಬಳಿಯ ಚಿಕ್ಕ ಅಂಕನಹಳ್ಳಿಯಲ್ಲಿರುವ ಪುರಾಣ ಪ್ರಸಿದ್ಧ ಶ್ರೀ ನಂದಿ ಬಸವೇಶ್ವರಸ್ವಾಮಿ ಬೃಹತ್ ದನಗಳ ಜಾತ್ರೆಗೆ ಜಿಲ್ಲೆ ಹಾಗೂ ವಿವಿಧ ಜಿಲ್ಲೆಯಗಳಿಂದ ಹೆಚ್ಚಿನ ರಾಸುಗಳು ಬಂದಿವೆ.

ಜ.15 ರಿಂದ 25 ರವರೆಗೆ ದನಗಳ ಜಾತ್ರೆ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರಾಸುಗಳು ಜಾತ್ರೆಗೆ ಬರುತ್ತಿವೆ. ಜಿಲ್ಲೆಯಲ್ಲಿ ವರ್ಷದ ಆರಂಭದಲ್ಲಿ ನಡೆಯುವ ಬೃಹತ್ ಬಾರಿ ದನಗಳ ಜಾತ್ರೆ ಇದ್ದಾಗಿದ್ದು ಮಂಡ್ಯ, ನಾಗಮಂಗಲ, ಕೆ.ಆರ್.ಪೇಟೆ, ಶ್ರೀರಂಗಪಟ್ಟಣ, ರಾಮನಗರ, ಚನ್ನಪಟ್ಟಣ, ಮಾಗಡಿ ಸೇರಿದಂತೆ ವಿವಿಧ ಭಾಗಗಳಿಂದ ಸುಮಾರು 5 ಸಾವಿರಕ್ಕೂ ಹೆಚ್ಚು ಜೋಡಿ ರಾಸುಗಳು ಜಾತ್ರೆಗೆ ಬಂದಿವೆ. ಬಹುತೇಕ ಹಳ್ಳಿಕಾರ್ ರಾಸುಗಳ ಕಂಡುಬಂದಿದ್ದು, ಸುಮಾರು 80 ರಿಂದ 7 ಲಕ್ಷ ರೂ. ಮೌಲ್ಯದ ರಾಸುಗಳು ಜಾತ್ರೆಯಲ್ಲಿ ಕಂಡು ಬಂದಿವೆ. ರಾಸುಗಳನ್ನು ಕೊಳ್ಳಲು ಮತ್ತು ಮಾರಾಟ ಮಾಡಲು ವಿವಿಧ ಜಿಲ್ಲೆಗಳಿಂದ ಹೆಚ್ಚಿನ ರೈತರು ಜಾತ್ರೆಗೆ ಆಗಮಿಸುತ್ತಿದ್ದು, ನಿತ್ಯ ಲಕ್ಷಾಂತರ ರೂ. ವಹಿವಾಟು ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ರಾಸುಗಳಿಗೆ ಹಾಗೂ ರೈತರಿಗೆ ಕುಡಿಯುವ ನೀರು ಹಾಗೂ ಮೇವಿಗೆ ತೊಂದರೆಯಾಗದಂತೆ ತಾಲೂಕು ಆಡಳಿತ ಅಗತ್ಯ ಕ್ರಮ ಕೈಗೊಂಡಿದೆ. ರೈತರು ಬೃಹತ್ ಶಾಮಿಯಾನ ಹಾಕಿ ಅದರಲ್ಲಿ ರಾಸುಗಳನ್ನು ಕಟ್ಟಿದ್ದಾರೆ. ರಾತ್ರಿಯ ವೇಳೆ ವಿಶೇಷ ದೀಪಾಲಂಕಾರ ಮಾಡುವ ಜತೆಗೆ ರಾಸುಗಳಿಗೆ ಹೂವು, ಸೇಬು ಸೇರಿದಂತೆ ವಿವಿಧ ರೀತಿಯ ಅಲಂಕಾರಗಳನ್ನು ಮಾಡಲಾಗುತ್ತಿದೆ.

ಮಸ್ತ್ ವ್ಯಾಪಾರ: ರೈತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಕಡಲೆಪುರಿ, ಕಬ್ಬಿನ ಜ್ಯೂಸ್, ಮಾಂಸಾಹಾರಿ, ಸಸ್ಯಹಾರಿ ಹೋಟೆಲ್‌ಗಳು ಸೇರಿದಂತೆ ಹಲವಾರು ಅಂಗಡಿಗಳನ್ನು ತೆರೆಯಲಾಗಿವೆ. ಹೆಚ್ಚಿನ ಮಟ್ಟದಲ್ಲಿ ವ್ಯಾಪಾರವಾಗುತ್ತಿರುವುದರಿಂದ ಅಧಿಕ ಲಾಭ ಕಂಡು ಬರುತ್ತಿರುವುದು ವ್ಯಾಪಾರಸ್ಥರಿಗೆ ಖುಷಿ ತಂದಿದೆ.

ಜಾತ್ರೆಯಲ್ಲಿ ರಾಸುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ತಾತ್ಕಾಲಿಕ ಪಶು ಚಿಕಿತ್ಸಾ ಕೇಂದ್ರ ತೆರಯಲಾಗಿದ್ದು, ಅಗತ್ಯ ವೈದ್ಯರು ಹಾಗೂ ಸಿಬ್ಬಂದಿ ನೇಮಿಸಲಾಗಿದೆ.

ವಿಶೇಷ ಪೂಜಾ ಕಾರ್ಯಕ್ರಮ: ಶ್ರೀ ನಂದಿ ಬಸವೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ಜ. 17 ರಂದು ಪ್ರಥಮ ಪುಣ್ಯಾಹ, ನಂದಿ ಧ್ವಜಾರೋಹಣ ಮತ್ತು ಅಂಕುರಾರ್ಪಣೆ, ರುದ್ರಾಭಿಷೇಕ, ಬಿಲ್ವಾರ್ಚನೆ, ಬನ್ನಿ ಮಂಟಪ ಪ್ರದಕ್ಷಿಣೆ, ಕುಂಕುಮಾರ್ಚನೆ ಅದ್ದೂರಿಯಾಗಿ ನಡೆಯಿತು. ಜ.19 ಚಿತ್ರ ಮಂಟಪೋತ್ಸವ, 20 ಮಹಾ ಉತ್ಸವ, 21 ಹುಲಿವಾಹೋತ್ಸವ, 22 ಹೂವಿನ ಪಲ್ಲಕ್ಕಿ, 23 ಚಂದ್ರ ಮಂಡಲೋತ್ಸವ, 24 ಅಶ್ವವಾಹನೋತ್ಸವ, 25 ತೆಪ್ಪೋತ್ಸವ, ವೃಷಭೋತ್ಸವ, ವಸಂತೋತ್ಸವ, ಮಹಾಂಗಳರತಿ, ರಥಸಪ್ತಮಿ ಪೂಜೆ ನಡೆಯಲಿವೆ ಎಂದು ದೇಗುಲದ ಪ್ರಧಾನ ಅರ್ಚಕ ಸಿ.ಜಿ.ಗೌರಿಶಂಕರ್, ಜೆ.ಎಂ.ಕಲ್ಲೇಶ್‌ಕುಮಾರ್ ತಿಳಿಸಿದ್ದಾರೆ.

ಆತಗೂರು ಹೋಬಳಿಯ ಚಿಕ್ಕ ಅಂಕನಹಳ್ಳಿಯ ಗ್ರಾಮದಲ್ಲಿರುವ ನಂದಿ ಬಸವೇಶ್ವರಸ್ವಾಮಿ ಹಾಗೂ ಬೃಹತ್ ದನಗಳ ಜಾತ್ರೆಗೆ ಇತಿಹಾಸವಿದೆ. ಇಲ್ಲಿಗೆ ಬಂದು ರಾಸುಗಳಿಗೆ ತೀರ್ಥ ಪ್ರೋಕ್ಷಣೆ ಮಾಡಿದರೆ ಯಾವುದೇ ರೋಗ ಬರುವುದಿಲ್ಲ. ಆದ್ದರಿಂದ ಜಾತ್ರೆಗೆ ವಿವಿಧ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿ ವರ್ಷ ರಾಸುಗಳು ಬರುವುದು ವಿಶೇಷ.

ಸಿ.ಜಿ.ಗೌರಿಶಂಕರ್ ದೇಗುಲದ ಪ್ರದಾನ ಅರ್ಚಕ

ಶ್ರೀನಂದಿ ಬಸವೇಶ್ವರಸ್ವಾಮಿ ಬೃಹತ್ ದನಗಳ ಜಾತ್ರೆಗೆ ತಾಲೂಕು ಆಡಳಿತದಿಂದ ರಾಸುಗಳಿಗೆ ಕುಡಿಯುವ ನೀರು, ಪಶುಗಳಿಗೆ ಚಿಕಿತ್ಸೆ ಸೇರಿದಂತೆ ಎಲ್ಲ ರೀತಿಯ ಮೂಲ ಸೌಕರ್ಯ ಕಲ್ಪಿಸಲಾಗಿದೆ.

ಡಾ.ಸ್ಮಿತಾರಾಮು ತಹಸೀಲ್ದಾರ್ ಮದ್ದೂರು

ಚಿಕ್ಕ ಅಂಕನಹಳ್ಳಿಯ ಪುರಾಣ ಪ್ರಸಿದ್ಧ ಶ್ರೀ ನಂದಿ ಬಸವೇಶ್ವರಸ್ವಾಮಿ ಬೃಹತ್ ದನಗಳ ಜಾತ್ರೆಗೆ ತಾಲೂಕು ಆಡಳಿತ ವತಿಯಿಂದ ಎಲ್ಲ ರೀತಿಯ ವ್ಯವಸ್ಥೆ ಮಾಡಿರುವುದು ಸಂತೋಷ ತಂದಿದೆ. ಶನಿವಾರದಿಂದ ಇನ್ನೂ ಹೆಚ್ಚಿನ ರಾಸುಗಳು ಜಾತ್ರೆಗೆ ಆಗಮಿಸಲಿವೆ.

ಯೋಗೇಶ್ ಬಿದರುಕೋಟೆ ರೈತ.