ಬೆಳಗಾವಿ: ಇತಿಹಾಸ ಹೊಂದಿರುವ ಹೂಗಾರ ಸಮುದಾಯದವರು ದೇವರು ಮತ್ತು ಭಕ್ತರ ನಡುವೆ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.
ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹೂಗಾರ ಮಾದಯ್ಯ ಜಯಂತ್ಯುತ್ಸವದಲ್ಲಿ ಮಾತನಾಡಿ, ಸಮುದಾಯದ ಜನರು ಶಿಕ್ಷಣ ಪಡೆದು ಮುನ್ನೆಲೆಗೆ ಬರಬೇಕು. ಸಮುದಾಯ ಕುರಿತು ಆಗಾಗ ಚಿಂತನೆಗಳನ್ನು ಹಮ್ಮಿಕೊಳ್ಳಬೇಕು. ಕೆಎಲ್‌ಇ ಸಪ್ತರ್ಷಿಗಳಲ್ಲಿ ಹೂಗಾರ ಸಮುದಾಯದವರು ಒಬ್ಬರಿರುವುದು ಹೆಮ್ಮೆ ಎಂದರು.
ಸಾನ್ನಿಧ್ಯ ವಹಿಸಿದ್ದ ನಿಡಸೋಸಿ ಸಿದ್ಧಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಶಿಕ್ಷಣದಿಂದ ಸಮುದಾಯ ಮುಂದೆ ಬರಲು ಸಾಧ್ಯ. ಹಾಗಾಗಿ ಪಾಲಕರು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕಲ್ಪಿಸಬೇಕು ಎಂದು ಹೇಳಿದರು.
ಯುವ ನಾಯಕರಾದ ರಾಹುಲ್ ಜಾರಕಿಹೊಳಿ ಹಾಗೂ ಸರ್ವೋತ್ತಮ ಜಾರಕಿಹೊಳಿ ಮಾತನಾಡಿ, ಜಾರಕಿಹೊಳಿ ಕುಟುಂಬ ಹೂಗಾರ ಸಮುದಾಯಕ್ಕೆ ಬೆನ್ನೆಲುಬಾಗಿ ಸಹಾಯ, ಸಹಕಾರ ನೀಡಲಿದೆ ಎಂದು ತಿಳಿಸಿದರು.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಬಸವಣ್ಣನವರ ಕಾಯಕ ತತ್ತ್ವದಡಿ ಕೆಲಸ ಮಾಡುತ್ತಿರುವ ಹೂಗಾರ ಸಮುದಾಯ ಮನೆಮನೆಗೂ ಚಿರಪರಿಚಿತರು. ಹೂಗಾರ ಮಾದಯ್ಯನವರ ಸಭಾಭವನಕ್ಕೆ 10 ಲಕ್ಷ ರೂ. ಅನುದಾನ ಕೊಡುವುದಾಗಿ ಭರವಸೆ ನೀಡಿದರು. ಶಾಸಕ ಅಭಯ ಪಾಟೀಲ, ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿದರು.
ಬೆಳಗ್ಗೆ ಚನ್ನಮ್ಮ ವೃತ್ತದಿಂದ ಹೂಗಾರ ಮಾದಯ್ಯನವರ ಭಾವಚಿತ್ರದ ಮೆರವಣೆಗೆ ಜರುಗಿತು. ಹೂಗಾರ ಸಂಘದ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ಸಮುದಾಯದ ಜಿಲ್ಲಾಧ್ಯಕ್ಷ ಶಿವಾನಂದ ಹೂಗಾರ, ಉಪಾಧ್ಯಕ್ಷ ಮಹಾದೇವ ಹೂಗಾರ, ಪ್ರಧಾನ ಕಾರ್ಯದರ್ಶಿ ಮೋಹನ ಹೂಗಾರ, ಕಾರ್ಯದರ್ಶಿ ಮಾರುತಿ ಗುರವ, ಖಜಾಂಚಿ ದಾನಪ್ಪ ಹೂಗಾರ, ಸಂಘಟನಾ ಕಾರ್ಯದರ್ಶಿ ಮೋಹನ ಹೂಗಾರ, ಸಹ ಸಂಘಟನಾ ಕಾರ್ಯದರ್ಶಿ ಅರ್ಜುನ ಹೂಗಾರ, ತಾಲೂಕು ಅಧ್ಯಕ್ಷರಾದ ದಾನಪ್ಪ ಹೂಗಾರ, ಚನ್ನಯ್ಯ ಹೂಗಾರ, ಶಿವಾನಂದ ಹೂಗಾರ, ಮುತ್ತಪ್ಪ ಹೂಗಾರ, ಮಾರುತಿ ಹೂಗಾರ, ರಾಮಪ್ಪ ಗುರವ, ರಾಚಪ್ಪ ಪೂಜಾರಿ, ಮುಕುಂದ ಪೂಜಾರಿ, ಶ್ರೀಶೈಲ ಗುರವ, ರಾಜು ಗುರವ, ಈರಣ್ಣ ಗುರವ ಹಾಗೂ ಇತರರಿದ್ದರು. ಬಸವರಾಜ ಗಾರಗಿ ನಿರೂಪಿಸಿದರು.
ಸರ್ಕಾರದಿಂದ ಹೂಗಾರ ಮಾದಯ್ಯನವರ ಜಯಂತಿ ಆಚರಿಸಬೇಕು. ಮಾದಯ್ಯ ಹೆಸರಿನಲ್ಲಿ ಸಮುದಾಯ ಭವನ ನಿರ್ಮಿಸಬೇಕು. ಸಮುದಾಯದ ಶೇ.80 ಜನರು ಅನಕ್ಷರಸ್ಥರಾಗಿದ್ದು, ಸಮುದಾಯ ಉನ್ನತಿಗೆ ಸರ್ಕಾರ ಕ್ರಮವಹಿಸಬೇಕು.| ಶಿವಲಿಂಗಪ್ರಭು ಹೂಗಾರ ಹೂಗಾರ ಸಂಘದ ಜಿಲ್ಲಾ ಉಪಾಧ್ಯಕ್ಷ