ಜಿಲ್ಲೆ

ಹುದಗೂರು ಜಾತ್ರಾ ಮಹೋತ್ಸವ ಅದ್ದೂರಿ

ವಿಜಯವಾಣಿ ಸುದ್ದಿಜಾಲ ಗೌರಿಬಿದನೂರು

ತಾಲೂಕಿನ ಹುದುಗೂರು ಗ್ರಾಮ ದೇವತೆಗಳಾದ ಚೌಡೇಶ್ವರಿ ದೇವಿ, ಮರಿಗಮ್ಮ ದೇವಿ ಮತ್ತು ಗಂಗಮ್ಮ ದೇವಿ ದೀಪೋತ್ಸವ ಹಾಗೂ ಜಾತ್ರಾ ಮಹೋತ್ಸವ ಮಂಗಳವಾರ ಮತ್ತು ಬುಧವಾರ 2 ದಿನಗಳ ಕಾಲ ವಿಜೃಂಭಣೆಯಿಂದ ನೆರವೇರಿತು.

ಜಾತ್ರೋತ್ಸವದ ಪ್ರಯುಕ್ತ ಗ್ರಾಮದಲ್ಲಿ ವಿಶೇಷ ವಿದ್ಯುತ್ ದೀಪಾಲಂಕಾರ, ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು. ಹೆಣ್ಣುಮಕ್ಕಳು ತಂಬಿಟ್ಟು ಆರತಿಗಳೊಂದಿಗೆ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಯುವಕರು ತಮಟೆ ತಾಳಕ್ಕೆ ಕುಣಿದು ಕುಪ್ಪಳಿಸಿದರು.

ಬುಧವಾರ ಗ್ರಾಮವಿಡಿ ಬಾಡೂಟದ ಘಮಲು, ನೆಂಟರು, ಸ್ನೇಹಿತರಿಗೆಲ್ಲ ಅಹ್ವಾನ ನೀಡಿದ್ದರಿಂದ ಇಡೀ ಗ್ರಾಮದ ತುಂಬ ದ್ವಿಚಕ್ರ ಹಾಗೂ ದ್ವಿಚಕ್ರ ವಾಹನಗಳು ಹೆಜ್ಜೆ ಇಡಲು ಸಾಧ್ಯವಾಗದಂತೆ ತುಂಬಿ ಹೋಗಿದ್ದವು.

ಆದ್ದರಿಂದ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತಲ್ಲದೆ ನಗರದ ಬೈಚಾಪುರ ಕ್ರಾಸ್‌ನಿಂದ ಹುದಗೂರು ಮಾರ್ಗವಾಗಿ ಯಾವುದೇ ರೀತಿಯ ಭಾರಿ ವಾಹನಗಳಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ವಾಟದಹೊಸಹಳ್ಳಿ ಮಾರ್ಗವಾಗಿ ಲಕ್ಷ್ಮಿಪುರ ಕ್ರಾಸ್ ಮೂಲಕ ನಗರಕ್ಕೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ ಜಾತ್ರೆಯಲ್ಲಿ ಭಾಗವಹಿಸಿ ಮಾತನಾಡಿ, ಉತ್ತಮ ಮಳೆಯಾಗಲಿ. ರೈತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಆಷಾಢ ಮಾಸದಲ್ಲಿ ಪ್ರತಿ ಹಳ್ಳಿಗಳಲ್ಲಿ ಊರ ದೇವತೆಗಳ ಜಾತ್ರೆ ಮಾಡಲಾಗುತ್ತದೆ. ಊರ ಜಾತ್ರೆಗಳಿಗೆ ಎಲ್ಲ ಸಮುದಾಯಗಳನ್ನು ಒಗ್ಗೂಡಿಸುವ ಶಕ್ತಿಯಿದೆ. ಆದ್ದರಿಂದ ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕು ಎಂದರು.

ಮುಖಂಡ ಆರ್.ಅಶೋಕ್ ಕುಮಾರ್ ಮಾತನಾಡಿ, ಹುದಗೂರು ತಾಲೂಕಿನ ದೊಡ್ಡ ಗ್ರಾಮಗಳಲ್ಲಿ ಒಂದಾಗಿದೆ. ಜಿಲ್ಲೆಯಲ್ಲೇ ಅದ್ದೂರಿಯಾಗಿ ಈ ಗ್ರಾಮದಲ್ಲಿ ಗ್ರಾಮ ದೇವತೆಗಳ ಜಾತ್ರೆಯನ್ನು ಆಚರಿಸಿಕೊಂಡು ಬರುತ್ತಿರುವುದು ವಿಶೇಷ ಎಂದರು.