ಕೃಷ್ಣಮೂರ್ತಿ ಪಿ.ಎಚ್. ಮಾಯಕೊಂಡ
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಜಲಜೀವನ್ ಮಿಷನ್(ಮನೆ ಮನೆಗೆ ಗಂಗೆ) ಯೋಜನೆಯು ಗ್ರಾಮೀಣ ಪ್ರದೇಶಗಳಲ್ಲಿ ಬಹುಭಾಗ ಸಫಲವಾಗಿದ್ದಕ್ಕಿಂತ ವಿಫಲವಾಗಿದ್ದೇ ಜಾಸ್ತಿ.
ಹುಚ್ಚವ್ವನಹಳ್ಳಿ ಗ್ರಾಮದಲ್ಲಿ ನಾಲ್ಕೂವರೆ ವರ್ಷ ಕಳೆದರೂ ಈ ಯೋಜನೆ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಜಿಲ್ಲಾಡಳಿತ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಯ ಅಧಿಕಾರಿಗಳು ಗಮನಹರಿಸಿಲ್ಲ.
ಜಿಲ್ಲೆಯ ಗಡಿ ಅಂಚಿನಲ್ಲಿರುವ ಹುಚ್ಚವ್ವನಹಳ್ಳಿ ಗ್ರಾಮವು 800-850 ಮನೆಗಳನ್ನು ಮತ್ತು 6 ಗ್ರಾಪಂ ಸದಸ್ಯರನ್ನು ಹೊಂದಿರುವ ದೊಡ್ಡ ಗ್ರಾಮವಾಗಿದೆ. ಇಲ್ಲಿಗೆ ನಾಲ್ಕೂವರೆ ವರ್ಷಗಳ ಹಿಂದೆ ಈ ಯೋಜನೆ ಆರಂಭಗೊಂಡಿತ್ತು. ಆದರೆ, ಪ್ರತಿ ಮನೆಗೂ ನಲ್ಲಿ ಅಳವಡಿಸಿ ನೀರನ್ನು ಸರಬರಾಜು ಮಾಡುವ ಕಾರ್ಯವನ್ನು ಗುತ್ತಿಗೆದಾರರು ಸಮರ್ಪಕವಾಗಿ ಮಾಡಿಲ್ಲ ಎಂಬುದು ಸಾರ್ವಜನಿಕರ ಆರೋಪ.
ದೊಡ್ಡ ಗ್ರಾಮವಾದ್ದರಿಂದ ಇಲ್ಲಿ ಎರಡು ಓವರ್ಹೆಡ್ ಟ್ಯಾಂಕ್ಗಳಿವೆ. ಒಂದು ಲಕ್ಷ ಲೀಟರ್ ಸಾಮರ್ಥ್ಯದ ಸುಮಾರು 50 ವರ್ಷದ ಹಳೆಯ ಟ್ಯಾಂಕ್ ಶಿಥಿಲಾವಸ್ಥೆ ತಲುಪಿದ್ದು, ಟ್ಯಾಂಕ್ ತುಂಬಿಸಿದ ಕೂಡಲೇ ನೀರು ಸೋರಿ ಹೋಗುತ್ತದೆ. ಇನ್ನೊಂದು ಗ್ರಾಮದ ಮಧ್ಯಭಾಗದಲ್ಲಿ ನಿರ್ಲಕ್ಷ್ಯ್ಕೊಳಗಾಗಿರುವ, ಸ್ವಚ್ಛತೆ ಕಾಣದ 50 ಸಾವಿರ ಲೀಟರ್ ಸಾಮರ್ಥ್ಯದ ಹೊಸ ಟ್ಯಾಂಕ್. ಇವುಗಳ ದುರಸ್ತಿ ಮತ್ತು ಸ್ವಚ್ಛ ಮಾಡಿಸುವಂತೆ ಪಿಡಿಒ ಮತ್ತು ಆರ್ಡಿಪಿಆರ್ ಅಧಿಕಾರಿಗಳನ್ನು ವಿಚಾರಿಸಿದರೆ ಇದು ಜಲಜೀವನ್ ಯೋಜನೆಯ ಗುತ್ತಿದಾರರ ಕೆಲಸ ಎಂದು ಕೈಚೆಲ್ಲುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.
ಅರೆಬರೆ ಕಾಮಗಾರಿಯ ಚಿತ್ರಣ
ಗ್ರಾಮದ ಕೆಲವು ಭಾಗಗಳಲ್ಲಿ ಪೈಪ್ ಅಳವಡಿಸಲು ರಸ್ತೆಗಳನ್ನು ಅಗೆದು ಹಾಗೆಯೇ ಬಿಡಲಾಗಿದೆ. ಇನ್ನೂ ಕೆಲವು ಭಾಗಗಳಲ್ಲಿ ಪೈಪ್ಗಳನ್ನು ಅಳವಡಿಸಿ ನಲ್ಲಿಗಳನ್ನು ಹಾಕದೆ ಬಿಟ್ಟಿದ್ದು, ಅಲ್ಲಲ್ಲಿ ಪೈಪ್ಗಳನ್ನು ರಾಶಿ ಹಾಕಿರುವುದು ಕಂಡುಬಂದಿದೆ. ಯಾವುದೇ ಕೆಲಸ ಸಂಪೂರ್ಣವಾಗಿ ಮುಗಿದಿಲ್ಲ.
ತಾಲೂಕಿನ ಹುಚ್ಚವ್ವನಹಳ್ಳಿ ಸೇರಿ ಯಾವ್ಯಾವ ಗ್ರಾಮಗಳಲ್ಲಿ ಜಲಜೀವನ್ ಯೋಜನೆ ಕೆಲಸಗಳು ಪೂರ್ಣಗೊಳ್ಳದೆ ಬಾಕಿ ಉಳಿದಿವೆಯೋ, ಅಲ್ಲಿನ ಕೆಲಸಗಳನ್ನು ಕೂಡಲೇ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಇಂಜಿನಿಯರ್ಗೆ ಮತ್ತು ಗುತ್ತಿಗೆದಾರರಿಗೆ ಸೂಚನೆ ನೀಡಿದ್ದೇನೆ. | ರಾಮಭೋವಿ, ಇಒ, ತಾಪಂ ದಾವಣಗೆರೆ. ಜಲಜೀವನ್ ಯೋಜನೆ ಕೆಲಸ ನಮ್ಮ ಗ್ರಾಮದಲ್ಲಿ ಅರೆಬರೆಯಾಗಿ ಉಳಿದಿದೆ. ನೀರಿನ ಟ್ಯಾಂಕ್ ದುರಸ್ತಿಯಾಗಿಲ್ಲ. ನಾಲ್ಕೂವರೆ ವರ್ಷಗಳಾದರೂ ಕೆಲಸ ಪೂರ್ಣಗೊಂಡಿಲ್ಲ. ಆದ್ದರಿಂದ ಈಗಿರುವ ಗುತ್ತಿಗೆದಾರರನ್ನು ಬದಲಾಯಿಸಿ ಬೇರೆಯವರಿಗೆ ಗುತ್ತಿಗೆ ನೀಡಲು ಜಿಪಂ ಮತ್ತು ತಾಪಂಗೆ ಪತ್ರ ಬರೆಯಲಾಗಿದೆ. | ಆರ್.ಸಿ. ಗಣೇಶ್, ಸದಸ್ಯರು, ಗ್ರಾಪಂ ಹುಚ್ಚವನಹಳ್ಳಿ.