ಜಿಲ್ಲೆ

ಹುಬ್ಬಳ್ಳಿಯಲ್ಲಿ ಜಡಿಮಳೆಕೆಲವೆಡೆ ಮನೆಗೆ ಭಾಗಶಃ ಹಾನಿ

Dharwada - Basavaraj Idli

ಹುಬ್ಬಳ್ಳಿ: ನಗರದಲ್ಲಿ ಗುರುವಾರವೂ ವರುಣನ ಆರ್ಭಟ ಮುಂದುವರಿದಿದೆ. ಪುಷ್ಯ ಮಳೆಯು ಸಾಕೆನ್ನುವಷ್ಟು ಸುರಿಯುತ್ತಿದೆ. ಬೆಳಗ್ಗೆಯಿಂದ ಸಂಜೆಯುವರೆಗೂ ಬಿಟ್ಟು ಬಿಡದೇ ಸುರಿದ ಪರಿಣಾಮ ನಗರದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಹಲವೆಡೆ ರಸ್ತೆಗಳು ಜಲಾವೃತವಾಗಿವೆ. ಮಳೆ ಜತೆಗೆ ಗಾಳಿಯು ಜೋರಾಗಿ ಬೀಸುತ್ತಿರುವುದರಿಂದ ಜನರು ಹೊರಗೆ ಬರದಂತಾಗಿದೆ.

ಜಡಿ ಮಳೆಗೆ ಹಲವು ಕಡೆಗಳಲ್ಲಿ ಮನೆಗಳು ಜಖಂಗೊಂಡಿವೆ. ಹುಬ್ಬಳ್ಳಿಯ ಪಡದಯ್ಯನ ಹಕ್ಕಲದಲ್ಲಿ ಮನೆಯೊಂದರ ಗೋಡೆ ಭಾಗಶಃ ಕುಸಿದಿದೆ. ಹನುಮಂತಪ್ಪ ಟಪಾಲ್ ಅವರಿಗೆ ಸೇರಿದ ಮನೆಯ ಗೋಡೆ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.

ಹುಬ್ಬಳ್ಳಿ ನಗರ ಹಾಗೂ ತಾಲೂಕು ವ್ಯಾಪ್ತಿಯಲ್ಲಿ ವ್ಯಾಪಕ ಮಳೆಯಾಗಿದೆ. ಹುಬ್ಬಳ್ಳಿ ಹೋಬಳಿ 17.1 ಎಂಎಂ, ಛಬ್ಬಿ 20.4 ಎಂಎಂ, ಶಿರಗುಪ್ಪಿ 14.2 ಎಂಎಂ ಹಾಗೂ ಬ್ಯಾಹಟ್ಟಿ ಹೋಬಳಿಯಲ್ಲಿ 13.6 ಎಂಎಂ ಮಳೆಯಾಗಿದೆ ಎಂದು ತಹಸೀಲ್ದಾರ್ ಕಲಗೌಡ ಪಾಟೀಲ ತಿಳಿಸಿದ್ದಾರೆ.