ಹುಬ್ಬಳ್ಳಿ : ಬಹು ನಿರೀಕ್ಷೆಯ ಹುಬ್ಬಳ್ಳಿ-ಪುಣೆ ಮಧ್ಯದ ವಂದೇ ಭಾರತ್ ರೈಲು ಸೇವೆಗೆ ಸೆ. 15 ರಂದು ಹಸಿರು ನಿಶಾನೆ ಸಿಗಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಅಂದು ದೇಶದ ವಿವಿಧ ನಿಲ್ದಾಣಗಳ ಮಧ್ಯೆ ಸಂಚರಿಸುವ ಹೊಸ ವಂದೆ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ.
ಅಂದು ವಂದೆ ಭಾರತ್ ರೈಲು ಪುಣೆಯಿಂದ ಸಂಚಾರ ಪ್ರಾರಂಭಿಸಲಿದೆ. ಈಗಾಗಲೇ ಹುಬ್ಬಳ್ಳಿ ಮಾರ್ಗವಾಗಿ ಧಾರವಾಡ-ಬೆಂಗಳೂರು ಮಧ್ಯೆ ವಂದೇ ಭಾರತ್ ರೈಲು ಸಂಚರಿಸುತ್ತಿದ್ದು, ಇದು ಈ ಭಾಗದಲ್ಲಿ ಸಂಚರಿಸುವ ಎರಡನೇ ವಂದೇ ಭಾರತ್ ರೈಲು ಆಗಿದೆ.
ಮೂಲಗಳ ಪ್ರಕಾರ ಈ ವಂದೇ ಭಾರತ್ ರೈಲು ಸೆ. 15ರ ಉದ್ಘಾಟನಾ ಸಂಚಾರದ ನಂತರ ಸೋಮವಾರ ಹೊರತುಪಡಿಸಿ ವಾರದ ಇನ್ನುಳಿದ ಆರು ದಿನಗಳಲ್ಲಿ ಹುಬ್ಬಳ್ಳಿ-ಪುಣೆ ಮಧ್ಯೆ ಸಂಚರಿಸಲಿದೆ. ಆದರೆ, ನಿತ್ಯ ಯಾವ ದಿನಾಂಕದಿಂದ ಸಂಚಾರ ಪ್ರಾರಂಭಿಸಲಿದೆ ಎಂಬುದು ಇನ್ನೂ ನಿಗದಿಯಾಗಿಲ್ಲ.
ಈಗಾಗಲೇ ರೈಲ್ವೆ ಸಚಿವಾಲಯಕ್ಕೆ ಸಲ್ಲಿಸಿದ ಪ್ರಸ್ತಾವನೆ ಪ್ರಕಾರ ಈ ರೈಲು ಬೆಳಗಿನಜಾವ 5 ಗಂಟೆಗೆ ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಹೊರಟು, ಮಧ್ಯಾಹ್ನ 2.10ಕ್ಕೆ ಪುಣೆ ತಲುಪಲಿದೆ. ಮರಳಿ 2.40ಕ್ಕೆ ಪುಣೆಯಿಂದ ಹೊರಟು, ರಾತ್ರಿ 11.50ಕ್ಕೆ ಮರಳಿ ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣ ತಲುಪಲಿದೆ ಎಂದು ನೈಋತ್ಯ ರೈಲ್ವೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಧಾರವಾಡ, ಬೆಳಗಾವಿ, ಮೀರಜ್, ಸಾಂಗ್ಲಿ, ಸತಾರಾ ನಿಲ್ದಾಣಗಳಲ್ಲಿ ಈ ರೈಲು ನಿಲುಗಡೆಗೊಳ್ಳಲಿದೆ ಎಂದು ಹೇಳಲಾಗಿದೆ.