ಹುಬ್ಬಳ್ಳಿ: ಉತ್ತರ ಕರ್ನಾಟಕದ ಹೆಬ್ಬಾಗಿಲು, ವಾಣಿಜ್ಯ ನಗರಿ ಎಂದೆಲ್ಲ ಕರೆಸಿಕೊಳ್ಳುವ ಹುಬ್ಬಳ್ಳಿ ಹಾಗೂ ವಿದ್ಯಾಕಾಶಿ ಧಾರವಾಡದಲ್ಲಿ ಒಂದು ಸುವ್ಯವಸ್ಥಿತ ಸ್ಕೇಟಿಂಗ್ ಮೈದಾನ ಇಲ್ಲದಿರುವುದು ಕ್ರೀಡಾಸಕ್ತರ ಉತ್ಸಾಹ ಕುಂದುವಂತೆ ಮಾಡಿದೆ.
ಬೆಂಗಳೂರು, ಮಂಗಳೂರು, ಶಿವಮೊಗ್ಗ ಹೀಗೆ ಯಾವುದೇ ನಗರಗಳಿಗೆ ಹೋದರೂ ಅಲ್ಲಿ ದೊಡ್ಡ ಪ್ರಮಾಣದ ಸ್ಕೇಟಿಂಗ್ ಮೈದಾನಗಳನ್ನು ನಿರ್ಮಿಸಿಕೊಟ್ಟು ಕ್ರೀಡಾ ಚಟುವಟಿಕೆಗೆ ಪ್ರೋತ್ಸಾಹ ನೀಡಲಾಗಿದೆ. ಆದರೆ, ಹುಬ್ಬಳ್ಳಿ- ಧಾರವಾಡ ಅವಳಿನಗರ ಎಂದರೆ ಅದೇಕೋ ಕ್ರೀಡಾ ಚಟುವಟಿಕೆಗಳಿಗೆ ಅಷ್ಟೊಂದು ಪ್ರೋತ್ಸಾಹ ಸಿಗುತ್ತಿಲ್ಲ. ಇಂತಹ ತಾತ್ಸಾರ ಧೋರಣೆ ಏಕೆ? ಎಂದು ಇಲ್ಲಿನ ಕ್ರೀಡಾ ಪ್ರೇಮಿಗಳು ಪ್ರಶ್ನಿಸುತ್ತಿದ್ದಾರೆ.
ಸದ್ಯ ಹುಬ್ಬಳ್ಳಿ & ಧಾರವಾಡದಲ್ಲಿ ಅನೇಕ ಸ್ಕೇಟಿಂಗ್ ಕೋಚ್ ಗಳು ಇದ್ದು, ಅವರ ಬಳಿ 200ಕ್ಕೂ ಹೆಚ್ಚು ವಿದ್ಯಾಥಿರ್ಗಳು ತರಬೇತಿ ಪಡೆಯುತ್ತಿದ್ದಾರೆ. ದೇವಸ್ಥಾನ, ಖಾಲಿ ಶೆಡ್, ರಸ್ತೆ ಹೀಗೆ ಜಾಗ ಲಭ್ಯ ಇರುವ ಕಡೆ ಪೂರ್ವ ಸಿದ್ಧತೆ ಮಾಡಿಕೊಳ್ಳುವ ವಿದ್ಯಾಥಿರ್ಗಳು, ಆಗಾಗ ಬೇರೆ ಊರುಗಳಲ್ಲಿರುವ ಸ್ಕೇಟಿಂಗ್ ಸ್ಪರ್ಧೆಗಳಿಗೂ ಹೋಗುತ್ತಿದ್ದಾರೆ.
ಆದರೆ, ಇವರಿಗೆ ಸಕಲ ಸೌಲಭ್ಯಗಳಿರುವ ಕ್ರೀಡಾಂಗಣ ಇಲ್ಲದಿರುವುದರಿಂದ ಅತ್ಯುತ್ತಮ ಪ್ರದರ್ಶನ ತೋರಲು ಸಾಧ್ಯವಾಗುತ್ತಿಲ್ಲ ಎಂಬ ಕೊರಗು ಕಾಡುತ್ತಿದೆ.
ಸ್ಪರ್ಧೆಗಳಲ್ಲಿ ಬೆಂಗಳೂರು, ಮೈಸೂರಿನಂತಹ ದೊಡ್ಡ ನಗರಗಳ ಮಕ್ಕಳು ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಇಲ್ಲಿನ ಮಕ್ಕಳಿಗೆ ಶಕ್ತಿ, ಸಾಮರ್ಥ್ಯ ಇದ್ದರೂ ಪ್ರದರ್ಶನ ನೀಡಲು ಸರಿಯಾದ ವ್ಯವಸ್ಥೆ ಇಲ್ಲದಿರುವುದು ಕಾರಣ ಎಂದು ಮಕ್ಕಳ ಪಾಲಕರು ಹೇಳುತ್ತಾರೆ.
ಚಿಕ್ಕ ಮೈದಾನ: ಇಲ್ಲಿಯ ಇಂದಿರಾ ಗಾಜಿನ ಮನೆ ಆವರಣದಲ್ಲಿ ನೂರು ಮೀಟರ್ ಸುತ್ತಳತೆಯ ಚಿಕ್ಕ ಮೈದಾನ ಇತ್ತೀಚೆಗೆ ನಿಮಿರ್ಸಲಾಗಿದೆ. ಇದನ್ನು ನಿಮಿರ್ಸಲು ದಶಕಗಳಿಂದ ಸ್ಕೇಟಿಂಗ್ ತರಬೇತಿಯಲ್ಲಿ ತೊಡಗಿರುವ ಅನೇಕ ಹಿರಿಯ ಕೋಚ್ಗಳು ಬಹಳ ಪ್ರಯತ್ನ ಪಟ್ಟಿರುವುದರಿಂದ ಸಾಧ್ಯವಾಗಿದೆ.
ಆದರೆ, ಈ ಮೈದಾನವು ಅತ್ಯಂತ ಚಿಕ್ಕದಾಗಿದೆ. ಇದರಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಇದಕ್ಕೆ ರಬ್ಬರ್ ಪೇಂಟ್ ಮಾಡಲಾಗಿದ್ದು, ಬಿಸಿಲಿಗೆ ಉಬ್ಬುತ್ತದೆ. ಮೇಲ್ಚಾವಣಿ ಇಲ್ಲದ್ದರಿಂದ ಮಳೆಗಾಲದಲ್ಲಿ ಸ್ಕೇಟಿಂಗ್ ಮಾಡಲು ಬರುವುದಿಲ್ಲ. ಸ್ಪರ್ಧೆಗಳನ್ನು ಆಯೋಜನೆ ಮಾಡಲೂ ಬರುವುದಿಲ್ಲ ಎಂದು ಹೇಳಲಾಗುತ್ತಿದೆ.
ಇತ್ತೀಚೆಗೆ ಜಿಲ್ಲಾ ಮಟ್ಟದ ಸ್ಕೇಟಿಂಗ್ ಸ್ಪರ್ಧೆಗಳು ನಡೆದಾಗ ಆಗಾಗ ಸುರಿದ ಮಳೆಯಿಂದಾಗಿ ಸ್ಪರ್ಧೆಗಳನ್ನು ನಿಲ್ಲಿಸುವ ಪ್ರಸಂಗ ಬಂದಿತ್ತು. ಮಳೆ ನಿಂತ ಮೇಲೆ ಹಸಿಯಾಗಿದ್ದ ಮೈದಾನವನ್ನು ಬಟ್ಟೆಯಿಂದ ಒರೆಸುವುದು, ನೀರು ತೆಗೆದು ನಂತರದಲ್ಲಿ ಮಕ್ಕಳಿಗೆ ಆಟ ಆಡಿಸಲಾಯಿತು ಎಂದು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮಕ್ಕಳ ಪಾಲಕರು ತಿಳಿಸಿದರು.
ಹುಬ್ಬಳ್ಳಿ &ಧಾರವಾಡದಲ್ಲಿ ಕನಿಷ್ಠ 200 ಮೀಟರ್ ಸುತ್ತಳತೆಯ ಮೈದಾನ ಬೇಕು. ಅದು ಕೂಡ ಸುಸಜ್ಜಿತವಾಗಿರಬೇಕು. ಒಳಾಂಗಣ ಕ್ರೀಡಾಂಗಣವಾಗಿರಬೇಕು. ಅದರಿಂದ ಎಲ್ಲ ಋತುಮಾನದಲ್ಲಿ ಸ್ಪರ್ಧೆ ಆಯೋಜನೆಗೆ ಹಾಗೂ ಸಿದ್ಧತೆ ನಡೆಸಲು ಅನುಕೂಲವಾಗುತ್ತದೆ ಎಂಬುದು ಕ್ರೀಡಾಪ್ರೇಮಿಗಳ ಅನಿಸಿಕೆ.
ಜಿಲ್ಲಾಡಳಿತ ಹಾಗೂ ಈ ಭಾಗದ ಜನಪ್ರತಿನಿಧಿಗಳು ಸ್ಕೇಟಿಂಗ್ ಗ್ರೌಂಡ್ ನಿರ್ಮಾಣದ ಬಗ್ಗೆ ಇನ್ನಾದರೂ ಗಮನ ಹರಿಸಲಿ.